ಹೈದರಾಬಾದ್, ಡಿಸೆಂಬರ್ 6 : ಹೈದರಾಬಾದ್‌ನಲ್ಲಿ ನಡೆದ ಎನ್ ಕೌಂಟರ್‌ನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗಳು ಮೃತಪಟ್ಟಿದ್ದಾರೆ. ಪೊಲೀಸರು ನಡೆಸಿರುವ ಎನ್ ಕೌಂಟರ್ ಹಿಂದೆ ಇರುವುದು ಕನ್ನಡಿಗ.
ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಪೊಲೀಸರು ನಡೆಸಿದ ಎನ್ ಕೌಂಟರ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ಆರೋಪಿಗಳು ಮೃತಪಟ್ಟಿದ್ದಾರೆ. ಈ ಕಾರ್ಯಾಚರಣೆ ನಡೆಸಿರುವುದು ಕರ್ನಾಟಕ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್.
ವಿಶ್ವನಾಥ್ ಸಜ್ಜನರ್ ಸೈಬರಾಬಾದ್‌ನ ಪೊಲೀಸ್ ಆಯುಕ್ತರು. ಶುಕ್ರವಾರ ಮುಂಜಾನೆ ಆರೋಪಿಗಳನ್ನು ಅತ್ಯಾಚಾರ, ಕೊಲೆ ನಡೆದ ಸ್ಥಳದ ಪರಿಶೀಲನೆಗೆ ಕರೆದುಕೊಂಡು ಹೋಗಲಾಗಿತ್ತು. ಆಗ ಆರೋಪಿಗಳು ಪರಾರಿಯಾಗಲು ಪ್ರಯತ್ನ ನಡೆಸಿದ್ದು, ಪೊಲೀಸರು ಗುಂಡು ಹಾರಿಸಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ. ನೂರಾರು ಜನರು ಆ ಪ್ರದೇಶದಲ್ಲಿ ಸೇರಿದ್ದು, ಪೊಲೀಸರು ಅವನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಎನ್ ಕೌಂಟರ್ ಬಗ್ಗೆ ದೇಶಾದ್ಯಂತ ಚರ್ಚೆಗಳು ಆರಂಭವಾಗಿವೆ.