ಉನ್ನಾವೋ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡ ನಿನ್ನೆ ರಾತ್ರಿ ಸಾವನ್ನಪ್ಪಿದ ಸುದ್ದಿ ಹಸಿಯಾಗಿರುವಾಗಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಂದಿದೆ. 2019ರ ಜವರಿಯಿಂದ ನವೆಂಬರ್ವರೆಗೆ ಉನ್ನಾವೋದಲ್ಲಿ 90 ಅತ್ಯಾಚಾರ ಪ್ರಕರಣ ಹಾಗೂ 185 ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.
ಹೌದು ಇದು ಶಾಕ್ ನೀಡಿದರೂ ಇದು ಸತ್ಯ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 63 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯಲ್ಲಿ 31 ಲಕ್ಷ ಜನರು ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಈ ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 90 ಅತ್ಯಾಚಾರ ಹಾಗೂ 185ಕ್ಕೂ ಹೆಚ್ಚು ಲೈಂಗಿತ ದೌರ್ಜನ್ಯದ ಪ್ರಕರಣಗಳು ದಾಖಲಾಗುವ ಮೂಲಕ ಉನ್ನಾವೋ ಉತ್ತರ ಪ್ರದೇಶದ ರೇಪ್ ಕ್ಯಾಪಿಟಲ್ ಆಗಿ ಬದಲಾಗಿದೆ.
ಈ ಪ್ರದೇಶದಲ್ಲಿ ಅತ್ಯಾಚಾರ ಹೆಚ್ಚಲು ಕಾರಣ ರಾಜಕಾರಣ ಎನ್ನಲಾಗುತ್ತಿದೆ. ಯಾಕೆಂದರೆ ಇಲ್ಲಿ ದೂರು ನೀಡಿದ ನಂತರ ಕೆಲವು ಆರೋಪಿಗಳ ಬಂಧನವಾದರೂ ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಬರುತ್ತಿದ್ದಾರೆ. ಮತ್ತೆ ಕೆಲವರು ಕಣ್ಮರೆಯಾಗುತ್ತಿದ್ದಾರೆ. ಪೊಲೀಸರು ರಾಜಕಾರಣಿಗಳ ಜೊತೆ ಕೈ ಜೋಡಿಸಿರುವ ಪರಿಣಾಮ ಅಪರಾಧಿಗಳು ನಿರ್ಭಯವಾಗಿ ಕೃತ್ಯ ಎಸಗುತ್ತಿದ್ದಾರೆ ಎಂದು ತಿಳಿದು ಬಂದಿದೆ.