ಚಿಕ್ಕಮಗಳೂರು : ಡಿಸೆಂಬರ್ 10 ರಿಂದ 12 ರ ವರೆಗೆ ನಡೆಯಲಿರುವ ದತ್ತ ಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, 5 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನೇಮಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಭಕ್ತರಿಗೆ ಕುಡಿಯುವ ನೀರು, ನೆರಳು, ವೈದ್ಯಕೀಯ ಶೌಚಾಲಯ, ಪ್ರಸಾದ ವ್ಯವಸ್ಥೆ ಹಾಗೂ ರಸ್ತೆ ದುರಸ್ತಿ ಮಾಡಲಾಗಿದೆ. ಡಿಸೆಂಬರ್ 12 ರಂದು ನಡೆಯುವ ದತ್ತ ಜಯಂತಿಯನ್ನು ಜಿಲ್ಲಾಡಳಿತವೇ ಆಯೋಜಿಸಿದೆ ಎಂದು ತಿಳಿಸಿದರು.
ಡಿಸೆಂಬರ್ 12 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ದತ್ತ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಗುಹೆ ಒಳಭಾಗದಲ್ಲಿ ಕ್ಯಾಮೆರಾ, ವಿಡಿಯೋ, ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ತಿಳಿಸಿದರು.