ರಾಜಧಾನಿ ದೆಹಲಿಯಲ್ಲಿ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಕಾರ್ಖಾನೆಗೆ ಹತ್ತಿಕೊಂಡ ಬೆಂಕಿ- 35 ಕಾರ್ಮಿಕರ ದುರ್ಮರಣ-ಕಹಳೆ ನ್ಯೂಸ್
ನವದೆಹಲಿ : ದೆಹಲಿಯ ರಾಣಿ ಜಾನ್ಸಿ ರಸ್ತೆಯಲ್ಲಿರುವ ಅನಜ್ ಮಂಡಿ ಕಾರ್ಖಾನೆಯಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ 35 ಜನ ಕಾರ್ಮಿಕರು ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ನಡೆದಿದೆ.ಬೆಂಕಿ ಹತ್ತಿಕೊಂಡ ವಿಷಯ ತಿಳಿದ ಕೂಡಲೇ 15 ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ಇನ್ನಷ್ಟು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಈ ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಗ್ನಿಶಾಮಕ ದಳದ ಉಪ ಮುಖ್ಯಾಧಿಕಾರಿ ಸುನಿಲ್ ಚೌಧರಿ, “ಬೆಂಕಿ 600 ಚದರಡಿ ಸ್ಥಳದಲ್ಲಿ ಹರಡಿದ್ದು, ಕಾರ್ಖಾನೆ ಒಳಗೆ ತೀವ್ರ ಕತ್ತಲು ಕವಿದಿತ್ತು. ಈ ಕಾರ್ಖಾನೆಯು ಶಾಲಾ ಬ್ಯಾಗುಗಳು, ಬಾಟಲ್ ಗಳು ಮತ್ತು ಇತರ ಸಾಮಗ್ರಿಗಳು ಇರುವ ಕಾರ್ಖಾನೆಯಾಗಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ “ಇದುವರೆಗೆ 15 ಜನರನ್ನು ರಕ್ಷಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಕೆಲವರು ಗಾಯಗೊಂಡಿದ್ದು, ಕೆಲವರು ತೀವ್ರ ಹೊಗೆಯಿಂದಾಗಿ ಉಸಿರುಗಟ್ಟಿ ತಲೆಸುತ್ತಿ ಬಿದ್ದಿದ್ದಾರೆ. ಈ ಘಟನೆ ನಡೆಯುವ ಸಂದರ್ಭದಲ್ಲಿ 20ರಿಂದ 25 ಕಾರ್ಮಿಕರು ಕಾರ್ಖಾನೆಯೊಳಗೆ ನಿದ್ದೆ ಮಾಡುತ್ತಿದ್ದರು ಎಂದು ಕಾರ್ಖಾನೆ ಮಾಲೀಕ ತಿಳಿಸಿದ್ದಾರೆ. ಮಧ್ಯಮ ಪ್ರಮಾಣದಲ್ಲಿ ಬೆಂಕಿ ಹತ್ತಿ ಉರಿದಿದ್ದು ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲಾಗಿದೆ ” ಎಂದು ಚೌಧರಿ ಹೇಳಿದರು. ರಕ್ಷಣಾ ಕಾರ್ಯ ಮುಂದುವರಿದಿದೆ.