# ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭರ್ಜರಿ ಗೆಲುವು..!
ಬೆಂಗಳೂರು,ಡಿ.9- ಭಾರೀ ಹಣಾಹಣಿಯಿಂದ ಕೂಡಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಸುತ್ತಿನಿಂದ ಹಿಡಿದು ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ಶಿವರಾಮ್ ಹೆಬ್ಬಾರ್ 30000 ಮತಗಳ ಅಂತರದಿಂದ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟರು. ಶಿರಸಿಯ ದಿ ಮಾರ್ಡನ್ ಎಜುಕೇಷನ್ ಸೊಸೈಟಿ ವಾಣಿಜ್ಯ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಅಂಚೆ ಮತ ಎಣಿಕೆಯಲ್ಲಿ ಮುನ್ನಡೆಸಿದ ಅವರು, ಪ್ರತಿ ಸುತ್ತಿನಲ್ಲೂ ಅಂತರವನ್ನು ಹೆಚ್ಚಳ ಮಾಡಿಕೊಂಡರು.ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಎಲ್ಲೂ ಕೂಡ ಬಿಜೆಪಿಗೆ ಸ್ಪರ್ಧೆವೊಡ್ಡಲೇ ಇಲ್ಲ. ಇನ್ನು ಕಣದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ನೋಟಾಗೆ ಚಲಾವಣೆಯಾದ ಮತಗಳಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ. ಶತಾಯಗತಾಯ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದ್ದ ಬಿಜೆಪಿ ನಾಯಕರು ಚುನಾವಣೆಗೂ ಮುನ್ನವೇ ಬಾರೀ ರಣತಂತ್ರವನ್ನು ರೂಪಿಸಿದ್ದರು.ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಉಸ್ತುವಾರಿ ನೀಡಲಾಗಿತ್ತು. ಜೊತೆಗೆ ಸಚಿವರಾದ ಶಶಿಕಲಾ ಜೊಲ್ಲೆ , ಕೇಂದ್ರ ಸಚಿವ ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ಸಂಸದ ಅನಂತಕುಮಾರ್ ಹೆಗಡೆ, ಶಾಸಕರಾದ ಹರೀಶ್ ಪೂಂಜಾ ಮತ್ತಿತರರಿಗೆ ಹೊಣೆಗಾರಿಕೆ ನೀಡಲಾಗಿತ್ತು.
# ಸಿದ್ದರಾಮಯ್ಯನವರ ವಿಪಕ್ಷ ನಾಯಕನ ಸ್ಥಾನ ಭದ್ರ ..!
ಬೆಂಗಳೂರು,ಡಿ.9- ಬಿಜೆಪಿ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ತನ್ನ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದ್ದರೆ ಹಲವು ಅಡ್ಡಿ ಆತಂಕಗಳ ನಡುವೆಯೂ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕ ಸ್ಥಾನವೂ ಗಟ್ಟಿಯಾಗಿದೆ. ಒಂದು ವೇಳೆ ಕಾಂಗ್ರೆಸ್ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಸರ್ಕಾರ ಅತಂತ್ರಕ್ಕೆ ಸಿಲುಕಿ ಪತನಗೊಂಡಿದ್ದರೆ ಮತ್ತೆ ಪಕ್ಷದಲ್ಲಿ ಹೊಸ ಸರ್ಕಾರ ರಚನೆಯ ಪ್ರಸ್ತಾವಗಳು ಚರ್ಚೆಯಾಗುತ್ತಿದ್ದವು.
ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡುವುದೊ ಅಥವಾ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆದು ಒಂದಿಷ್ಟು ವಿಪಕ್ಷ ಶಾಸಕರು ರಾಜೀನಾಮೆ ಕೊಟ್ಟಿದ್ದೇಯಾದರೆ ಬಿಜೆಪಿ ಸರ್ಕಾರ ಸುಭದ್ರವಾಗುತ್ತಿತ್ತು. ಈ ಎರಡೂ ಸಂದರ್ಭಗಳನ್ನು ಹೊರತುಪಡಿಸಿದ ಸರ್ಕಾರ ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸರ್ಕಾರ ರಚನೆ ಪ್ರಸ್ತಾವಗಳು ಚಾಲ್ತಿಗೆ ಬರುತ್ತಿದ್ದವು.
ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ಹತ್ತಾರು ಮಂದಿ ಅಖಾಡಕ್ಕಿಳಿಯುತ್ತಿದ್ದರು. 2013ರಲ್ಲಿ ಸುಲಭವಾಗಿ ಸಿಎಂ ಸ್ಥಾನ ಗಿಟ್ಟಿಸಿದಂತೆ ಈ ಬಾರಿ ಅವಕಾಶ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗುತ್ತಿರಲಿಲ್ಲ.