ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ಪುನರ್ ರಚನೆ ಮಾಡುವ ತಲೆನೋವು ಶುರುವಾಗಿದ್ದು, ಈಗಾಗಲೇ ಶಾಸಕರು ಸಂಪುಟ ಸೇರಲು ಪೈಪೋಟಿಯಲ್ಲಿ ಇದ್ದಾರೆ. ಸಚಿವ ಸ್ಥಾನ ಪಡೆಯುವ ನಿಟ್ಟಿನಲ್ಲಿ ಹೊಸ ಶಾಸಕರ ಜೊತೆ ಮೂಲ ಬಿಜೆಪಿ ಶಾಸಕರು ಕೂಡಾ ಪೈಪೋಟಿಗೆ ಇಳಿದಿದ್ದು ಮುಖ್ಯಮಂತ್ರಿಗೆ ಒತ್ತಡ ಹೆಚ್ಚಾಗುತ್ತಿದೆ.ಹೊಸ ಶಾಸಕರು ಮತ್ತು ಹಳೆಯ ಶಾಸಕರು ನಿನ್ನೆಯಿಂದಲ್ಲೇ ಮುಖ್ಯಮಂತ್ರಿಯವರನ್ನು ನಿರಂತರವಾಗಿ ಭೇಟಿಯಾಗುತ್ತಿದ್ದು ಮೂಲ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಮಾಡಾಳ್ ವೀರೂಪಾಕ್ಷಪ್ಪ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರಾಜುಗೌಡ, ಪೂರ್ಣಿಮಾ ಶ್ರೀನಿವಾಸ್, ಎಸ್ ಆರ್ ವಿಶ್ವನಾಥ್, ಎಸ್ ಎ ರಾಮದಾಸ್, ದತ್ತಾತ್ರೇಯ ಪಾಟೀಲ ರೇವೂರ, ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವ ಸಿ ಪಿ ಯೋಗೇಶ್ವರ್, ಅರಗ ಜ್ಞಾನೇಂದ್ರ, ಸುಭಾಷ್ ಗುತ್ತೇದಾರ್, ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಗೊಂದಲಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಮೊರೆ ಹೋಗಲು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಶನಿವಾರ ಅಥವಾ ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.
ಹೈಕಮಾಂಡ್ ಬಳಿ ಸಂಪುಟ ಪುನರ್ ರಚನೆಯ ಕುರಿತು ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಆದರೆ ಈ ಬಾರಿಯೂ ಸಚಿವ ಸ್ಥಾನ ದೊರಕದಿದ್ದರೆ ಪಕ್ಷದ ಸಚಿವರಲ್ಲಿ ಅಸಮಾಧಾನ ಹುಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಎಲ್ಲರ ವಿಶ್ವಾಸ ಪಡೆದು ಸಂಪುಟ ಪುನರ್ ರಚನೆ ಮಾಡಲು ಮುಖ್ಯಮಂತ್ರಿ ಮಂದಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.