ಗುವಾಹತಿ, ಡಿ.12- ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಹಿಂಸಾರೂಪ ತಾಳಿದ್ದು, ಅಸ್ಸಾಂನಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮತ್ತೊಂದೆಡೆ ರಾಜಧಾನಿ ಗುವಾಹತಿಯಲ್ಲಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಕಫ್ರ್ಯೂ ಬೇಧಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಉದ್ರಿಕ್ತ ಗುಂಪಿಗೆ ಎಚ್ಚರಿಕೆ ನೀಡಲು ಸೇನಾ ಪಡೆಗಳು ಪಥ ಸಂಚಲನ ನಡೆಸಿವೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು , ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿವೆ.
ಸಚಿವರ ಮನೆ ಮೇಲೆ ದಾಳಿ: ಅಸ್ಸಾಂ ದಿಬ್ರುಗಢ್‍ನ ದುಲಿಯಾಜನ್ ಪ್ರದೇಶದಲ್ಲಿರುವ ಸಂಸದ ಮತ್ತು ಕೇಂದ್ರ ಆಹಾರ ಸಂಸ್ಕರಣಾ ರಾಜ್ಯ ಸಚಿವರಾದ ರಾಮೇಶ್ವರ್ ತೇಲಿ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಮನೆ ಅವರಣದಲ್ಲಿ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಅದೃಷ್ಟವಶಾತ್ ಈ ವೇಳೆ ಮನೆಯಲ್ಲಿದ್ದ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.
ಇದಕ್ಕೂ ಮೊದಲು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನಾವಾಲ್ ಅವರ ದಿಬ್ರುಘಡ್ ನಿವಾಸದ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಅಲ್ಲದೆ ಬಿಜೆಪಿ ಶಾಸಕ ಪ್ರಶಾಂತ ಫುಕನ್ ಮತ್ತು ಬಿಜೆಪಿ ಮುಖಂಡ ಸುಭಾಷ್ ದತ್ತಾ ಅವರ ಮನೆ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹೊತ್ತಿ ಉರಿಯುತ್ತಿರುವ ಈಶಾನ್ಯ ರಾಜ್ಯ: ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯುತ್ತಿದ್ದಂತೆಯೇ ಅತ್ತ ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದೂ ಕೂಡ ತೀವ್ರಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ.
ರಾಜಧಾನಿ ಗುವಾಹತಿಯಲ್ಲಿ ಇಂದು ಬೆಳಗ್ಗೆ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಕಫ್ರ್ಯೂ ಬೇಧಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಲು ಮುಂದಾದಾಗ ಸೇನಾ ಪಡೆಗಳು ಉಗ್ರ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು. ನಂತರ ಗುವಾಹತಿಯ ಪ್ರಮುಖ ಸ್ಥಳಗಳಲ್ಲಿ ಸೇನಾ ಪಡೆಗಳು ಪಥ ಸಂಚಲನ ನಡೆಸಿದವು. ಪೌರತ್ವ (ತಿದ್ದುಪಡಿ) ಮಸೂದೆಯು ಈಶಾನ್ಯದಲ್ಲಿ ಹಿಂಸೆಗೆ ಕಾರಣವಾಗಿದ್ದು, ಬೃಹತ್ ಪ್ರತಿಭಟನೆಗೆ ಯಾವುದೇ ಪಕ್ಷ ಕರೆ ನೀಡಿರಲಿಲ್ಲವಾದರೂ ಸಾವಿರಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹತಿ, ದಿಬ್ರುಗಡ ಸೇರಿ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಕಿಚ್ಚು ತೀವ್ರಗೊಂಡಿದ್ದರಿಂದ ಅಸ್ಸಾಂನಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಗುವಾಹತಿಯಲ್ಲಿರುವ ಸಚಿವಾಲಯದ ಎದುರು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಹಲವು ಜನರು ಹಾಗೂ ಪತ್ರಕರ್ತರಿಗೆ ಗಾಯಗಳಾಗಿವೆ.
ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ತಾಳಿದ್ದು, ಹಿಂಸಾಪೀಡಿತ ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ 5000 ಅರೆ ಸೇನಾಪಡೆ ಸಿಬ್ಬಂದಿಯನ್ನು ವಿಶೇಷ ವಿಮಾನಗಳ ಮೂಲಕ ರವಾನಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಪೈಕಿ 2,000 ಯೋಧರು ಹಾಗೂ ದೇಶದ ವಿವಿಧ ಭಾಗಗಳಿಂದ 3,000 ಯೋಧರನ್ನು ಕರೆಯಿಸಿಕೊಂಡು, ಈಶಾನ್ಯ ರಾಜ್ಯಗಳಿಗೆ ರವಾನಿಸಲಾಗಿದೆ. ಸಿಆರ್‍ಪಿಎಫ್, ಬಿಎಸ್‍ಎಫ್ ಹಾಗೂ ಎಸ್‍ಎಸ್ಬಿ ಯೋಧರು ಈ ತಂಡಗಳಲ್ಲಿದ್ದಾರೆ. ತ್ರಿಪುರಾದಲ್ಲಿ ಸೇನಾ ಕಣ್ಗಾವಲು ಹಾಕಲಾಗಿದ್ದು, ಸುಮಾರು 15,000ಕ್ಕೂ ಅಧಿಕ ಯೋಧರು ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಇತ್ತ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಅನೇಕ ವಿದ್ಯಾರ್ಥಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ವಿಶ್ವವಿದ್ಯಾಲಯದ ಪ್ರವೇಶ ದ್ವಾರಗಳಲ್ಲಿ ಕ್ಷಿಪ್ರ ಕಾರ್ಯಪಡೆ ನಿಯೋಜಿಸಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ. ನಿಷೇಧಾಜ್ಞಾ (144 ಸೆಕ್ಷನ್) ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿ ಮುಖಂಡರು ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಾಂತಿಭಂಗ ಆರೋಪದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.
ಇಂದು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಇಂದೂ ಕೂಡ ಪ್ರತಿಭಟನೆಗಳು ಭುಗಿಲೆದ್ದಿದ್ದು , ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.