Monday, November 25, 2024
ಸುದ್ದಿ

ಧರ್ಮ ಸಂಕಟದಿಂದ ಪಾರಾದ ಧರ್ಮಾಧಿಕಾರಿಗಳು ; ಡಾ.ವೀರೇಂದ್ರ ಹೆಗ್ಗಡೆ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್ – ಕಹಳೆ ನ್ಯೂಸ್

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಿತಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಬಗ್ಗೆ ವಿಚಾರಣೆ ನಡೆಸಿರುವ ಉಚ್ಛ ನ್ಯಾಯಾಲಯ, ಪ್ರಕರಣವನ್ನು ವಜಾಗೊಳಿಸಿದೆ. ಅಲ್ಲದೇ, ಇಂತಹ ಆಧಾರರಹಿತ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಪದಾಧಿಕಾರಿ ಎಂದು ಗುರುತಿಸಿಕೊಂಡಿರುವ ರಂಜನ್ ರಾವ್ ಎರ್ಡೂರು ಎಂಬವರು ಆರೋಪ ಮಾಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕಾನೂನು ಮಿತಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿನಲ್ಲಿ ೧೦೫೦ ಎಕರೆಗೂ ಮಿಕ್ಕಿ ಆಸ್ತಿ ಹೊಂದಿದ್ದಾರೆ. ಈ ಆಸ್ತಿಗಳ ದಾಖಲೆ ಧರ್ಮಸ್ಥಳದ ಧರ್ಮಾಧಿಕಾರಿಗಳ ಹೆಸರಿನಲ್ಲಿ ದಾಖಲಾಗಿರುವುದು ಸರಿಯಲ್ಲ ಎಂದು ಹೇಳಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ತಿಳಿಸಿದಂತೆ, ಕ್ಷೇತ್ರಕ್ಕೆ ಸಂಬಂಧಪಟ್ಟ ಆಸ್ತಿಗಳು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಒಳಗೆ ಬರುವುದಾಗಿದ್ದು, ಅಲ್ಲಿರುವ ಆಸ್ತಿಯನ್ನು ಹೊಂದಲು ಧರ್ಮಾಧಿಕಾರಿ ಕುಟುಂಬಕ್ಕೆ ಅಧಿಕಾರವಿಲ್ಲ. ಭೂ ನ್ಯಾಯ ಮಂಡಳಿಯಲ್ಲಿ ಸುಳ್ಳು ಘೋಷಣಾ ಪತ್ರ ನೀಡಲಾಗಿದೆ. ಆದ ಕಾರಣ ವಂಚನೆ ಎಸಗಲಾಗಿದೆ. ಆಧಾಯ ತೆರಿಗೆ ಇಲಾಖೆಗಳಲ್ಲಿ ಮತ್ತು ಜಾಗದ ಪರಿಹಾರ ಪಡೆಯುವಲ್ಲಿ ಸರಿಯಾದ ಘೋಷಣಾ ಪತ್ರ ನೀಡಲಿಲ್ಲ ಎಂದು ಆರೋಪಿಸಿ ದೂರು ನೀಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ಠಾಣೆ ಪೊಲೀಸರು, ಆರೋಪ ಆಧಾರರಹಿತವಾಗಿದೆ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ರಂಜನ್ ರಾವ್ ಎರ್ಡೂರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ನ್ಯಾಯಾಲಯ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ವಾದ ಮಂಡಿಸಿದ ವಕೀಲ ಪಿ.ಪಿ. ಹೆಗ್ಡೆ ಅವರು, ರಂಜನ್ ರಾವ್ ಎರ್ಡೂರು ಅವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಹಲವು ದೂರುಗಳನ್ನು ನೀಡಿದ್ದು, ಅವುಗಳೆಲ್ಲ ವಜಾಗೊಂಡಿವೆ. ಅಲ್ಲದೇ, ದೂರುದಾರರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಪಟ್ಟ ವ್ಯಕ್ತಿಯಲ್ಲ. ಇವರೋರ್ವ ಹವ್ಯಾಸಿ ದೂರುದಾರರಾಗಿದ್ದಾರೆ. ಈಗಾಗಲೇ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದು, ಅವುಗಳಲ್ಲಿ ಸತ್ಯಾಂಶ ಇಲ್ಲ ಎಂದು ಸಾಬೀತಾಗಿದೆ. ಮಾತ್ರವಲ್ಲ, ಈ ರೀತಿ ಕ್ರಿಮಿನಲ್ ದೂರು ಸಲ್ಲಿಸುವ ಅಧಿಕಾರ ಇಲ್ಲ. ಆರೋಪಗಳೆಲ್ಲ ಸಿವಿಲ್ ಸ್ವರೂಪದ್ದಾಗಿದ್ದು, ಆಧಾರರಹಿತವಾಗಿದೆ. ಕೇವಲ ಪ್ರಚಾರಕ್ಕಾಗಿ ಹಾಗೂ ದುರುದ್ದೇಶಪೂರಿತ ದೃಷ್ಟಿಯಿಂದ ಕ್ರಿಮಿನಲ್ ಪ್ರಕರಣವನ್ನಾಗಿ ಪರಿವರ್ತಿಸುವ ಯತ್ನ ನಡೆಸುತ್ತಿದ್ದಾರೆ ಎಂದು ವಾದಿಸಿದ್ದರು.

ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಎಲ್ಲಾ ವ್ಯವಹಾರ ಹಾಗೂ ದಾಖಲೆಗಳು ಪಾರದರ್ಶಕವಾಗಿವೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸೇವೆಯಿಂದ ಅಸೂಯೆಗೊಂಡು, ದುರುದ್ದೇಶಪೂರಿತವಾಗಿ ದೂರು ದಾಖಲಿಸಲಾಗಿದೆ. ಕ್ರಿಮಿನಲ್ ದೂರು ದಾಖಲಿಸಲು ಯಾವುದೇ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿರುವ ಉಚ್ಛ ನ್ಯಾಯಾಲಯ, ಪ್ರಕರಣವನ್ನು ವಜಾಗೊಳಿಸಿದೆ. ಇಂತಹ ಆಧಾರರಹಿತ ಆರೋಪಗಳ ಬಗ್ಗೆ ಪೊಲೀಸರಿಗೆ ತನಿಖೆ ನಡೆಸುವ ಯಾವುದೇ ಅಧಿಕಾರ ಇಲ್ಲ ಎಂದು ಇದೇ ಸಂದರ್ಭ ತೀರ್ಪಿನಲ್ಲಿ ತಿಳಿಸಿದೆ.