Tuesday, November 26, 2024
ಸುದ್ದಿ

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗುವ ಐತಿಹಾಸಿಕ ” ಭಜನಾ ಸಂಭ್ರಮ 2019 ” ; ಸಾವಿರದ ಭಜನೆಗೆ ಸಾಕ್ಷಿಯಾಗಲಿದೆ ಶ್ರೀಕ್ಷೇತ್ರ ಹನುಮಗಿರಿ – ಕಹಳೆ ನ್ಯೂಸ್

ಪುತ್ತೂರು: ಹಿಂದೂ ಸಮಾಜದಲ್ಲಿನ ಸಾಮಾಜಿಕ ಪರಿವರ್ತನೆ, ವ್ಯಸನಮುಕ್ತ ಸಮಾಜ, ಸಂಸ್ಕಾರಯುತ ವ್ಯಕ್ತಿಗಳನ್ನು ಮಾಡುವಲ್ಲಿ ಭಜನಾ ಮಂಡಳಿಗಳ ಪಾತ್ರ ಬಹುಮುಖ್ಯವಾದದ್ದು, ಈ ರೀತಿಯ ಸಾಮಾಜಿಕ ಕಾಳಜಿಯುಳ್ಳ ಭಜನಾ ಮಂಡಳಿಗಳು ಒಂದೆಡೆ ಸೇರಿ ಸಮಾಜಮುಖಿ ಚಟುವಟಿಕೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ಹಿನ್ನೆಲೆಯಲ್ಲಿ ಮತ್ತು ಭಜನಾ ಮಂಡಳಿಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಭಜನಾ ಮಹಾಮಂಡಳ ಮಂಗಳೂರು ವಿಭಾಗ ಮತ್ತು ಶ್ರೀಕ್ಷೇತ್ರ ಹುಮಗಿರಿ ಪುತ್ತೂರು ಇದರ ವತಿಯಿಂದ ಡಿ.29ರಂದು ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಗೋಷ್ಠಿ, ಸಂಜೆ ಶೋಭಾಯಾತ್ರೆ, ಸಭೆ ಮತ್ತು ಭಜನೆಯ ಮೂಲಕ ಭಜನಾ ಸಂಭ್ರಮ ಜರುಗಲಿದೆ ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಭಾಗದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ ಸಾವಿರಕ್ಕೂ ಮಿಕ್ಕಿದ ಭಜನಾ ಮಂಡಳಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10 ರಿಂದ ವಿವಿಧ ಗೋಷ್ಠಿಗಳು ನಡೆಯಲಿದೆ. ಸಮಾಜ ಪರಿವರ್ತನೆಯಲ್ಲಿ ಭಜನಾ ಮಂಡಳಿಗಳ ಕಾರ್ಯಗಳು, ಮುಂದೇನು ಮಾಡಬಹುದು ಕುರಿತು ಗೋಷ್ಠಿಗಳು ನಡೆಯಲಿದೆ. ಭಜನಾ ಮಹಾಮಂಡಲ ಮೂಲಕ ಈಗಾಗಲೇ 40 ತಾಲೂಕಿನ ಸಂಯೋಜಕರ ಸಭೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು ನಡೆಸಿಕೊಡಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಐತಿಹಾಸಿಕ ಶೋಭಾಯಾತ್ರೆ :

ಮಧ್ಯಾಹ್ನ ಭೋಜನದ ಬಳಿಕ 3 ಗಂಟೆಗೆ ಶೋಭಾಯಾತ್ರೆ ಜರುಗಲಿದೆ. ಈಶ್ವರಮಂಗಲ ಮತ್ತು ಪಂಚಲಿಂಗೇಶ್ವರ ದೇವಳದ ಭಾಗದಿಂದ ಎರಡು ಭಾಗದಿಂದ ಶೋಭಾಯಾತ್ರೆ ಶ್ರೀ ಕ್ಷೇತ್ರ ಹನುಮಗಿರಿಗೆ ಆಗಮನವಾಗಲಿದೆ. ತಂಡಗಳ ಆಯ್ಕೆಯ ಕುಣಿತ ಭಜನೆಗಳು ಶೋಭಾಯಾತ್ರೆಗೆ ಮೆರುಗು ನೀಡಲಿದೆ ಎಂದು ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಸಭಾ ಕಾರ್ಯಕ್ರಮ :
ಶೋಭಾಯಾತ್ರೆ ಶ್ರೀಕ್ಷೇತ್ರಕ್ಕೆ ತಲುಪಿದ ತಕ್ಷಣ ಪ್ರಾರಂಭದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆಯ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಅವರು ಪ್ರಧಾನ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರೂ ಭಜನಾ ಸಂಭ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಮೋಹನ ಆಳ್ವ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಸೂರ್ಯಸ್ತಮಾನಕ್ಕೆ ಭಜನಾ ಸಂಭ್ರಮ :

ಸಭಾ ಕಾರ್ಯಕ್ರಮದ ಮುಗಿದ ಬಳಿಕ ಸಂಜೆ ಸೂರ್ಯಾಸ್ತಮಾನದ ಗಂಟೆ 6.12ಕ್ಕೆ ಸರಿಯಾಗಿ ಶಂಖೋದ್ಘೋಷ ನಡೆಯಲಿದೆ. ಈ ಸಂದರ್ಭದಲ್ಲಿ 1ಸಾವಿರ ದೀಪಗಳನ್ನು ಬೆಳಗಿಸಿ, 5ಸಾವಿರ ಭಜನಾ ಕಾರ್ಯಕರ್ತರಿಂದ 5ಸಾವಿರ ಹಣತೆಯನ್ನು ಉರಿಸಿ, ಈಗಾಗಲೇ ಆಯ್ಕೆ ಮಾಡಿರುವ 6 ಭಜನೆಗಳನ್ನು ಹಾಡುವ ಮೂಲಕ ಭಜನಾ ಸಂಭ್ರಮ ನಡೆಯಲಿದೆ. ಭಜನೆ ಮುಗಿದ ಬಳಿಕ ರಾತ್ರಿ ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯಲಿದೆ ಎಂದು ನನ್ಯ ಅಚ್ಚುತ್ತ ಮೂಡೆತ್ತಾಯ ಹೇಳಿದರು.

20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ :

ಒಟ್ಟು ಕಾರ್ಯಕ್ರಮದಲ್ಲಿ ಭಜನಾ ತಂಡದೊಂದಿಗೆ ಇತರ ಭಜನಾರ್ಥಿಗಳು ಬರುತ್ತಾರೆ. 1 ಸಾವಿರ ಭಜನಾ ಮಂಡಳಿಗಳು ಈಗಾಗಲೇ ನೋಂದಾವಣೆ ಮಾಡಿದ್ದಾರೆ. ಶೋಭಾಯಾತ್ರೆಯಲ್ಲಿ ಎಲ್ಲಾ ಭಜನಾ ತಂಡದವರು ಮತ್ತು ಅವರೊಂದಿಗೆ ಬಂದವರು ತಮ್ಮ ಭಜನಾ ಕಾರ್ಯಕ್ರಮ ನೀಡಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ಮತ್ತು ಭಜನಾ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ಒಟ್ಟು ಸುಮಾರು 20ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಎಂದು ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಹಿಂದೂ ಸಮಾಜಕ್ಕೆ ಚೈತನ್ಯ ತುಂಬುವ ಕೆಲಸ :

ನಮ್ಮ ಜಿಲ್ಲೆಯಲ್ಲಿ ಸಾವಿರಾರು ಭಜನಾ ಮಂಡಳಿಗಳಿವೆ. ಹಳ್ಳಿಹಳ್ಳಿಗಳಲ್ಲಿ ವ್ಯಾಪಿಸಿರುವ ಭಜನಾ ಮಂಡಳಿಗಳನ್ನು ಒಂದೆಡೆ ಸೇರಿಸಿ ಸಂಪೂರ್ಣ ಹಿಂದೂ ಸಮಾಜಕ್ಕೆ ಚೈತನ್ಯ ತುಂಬುವ, ಆ ಮೂಲಕ ಸಮರ್ಪಿತ ಬೃಹತ್ ಕಾರ್ಯಕರ್ತರ ಪಡೆಯನ್ನು ಕಟ್ಟುವ ಉದ್ದೇಶ ಹೊಂದಿರುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸಿದೆ. ಶುಭ ಸಮಾರಂಭಗಳ ಸಮಯದಲ್ಲಿ ಕುಣಿತ ಭಜನೆಗಳ ಮೂಲಕ, ಡಿಜೆ, ಪಾಶ್ಚಾತ್ಯ ಸಂಗೀತ, ಕುಡಿತ, ದುಶ್ಚಟಕ್ಕೆ ಬಲಿಯಾಗದಂತೆ ಭಜನೆ ಶಕ್ತಿಯಾಗಿದೆ. ಹಿಂದೂ ಸಮಾಜವನ್ನು ಸುಖಿ, ಸಮೃದ್ಧಿ, ಸ್ವಸ್ಥ, ವ್ಯಾಜ್ಯ ರಹಿತ, ವ್ಯಸನ ಮುಕ್ತ, ಸಂಸ್ಕಾರಯುಕ್ತ, ಸಾಮರಸ್ಯ ಯುಕ್ತ ಮಾಡುವ ಬಹುದೊಡ್ಡ ಗುರಿಯನ್ನು ಹೊಂದಿದ್ದೇವೆ ಎಂದು ಭಜನಾ ಸಂಭ್ರಮದ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಜನಾ ಸಂಭ್ರಮ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸಹಜ್ ರೈ ಬಳಜ್ಜ, ನಿರ್ವಹಣಾ ಸಮಿತಿ ಕಾರ್ಯಾದ್ಯಕ್ಷ ಮಂಜುನಾಥ ರೈ, ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಅವರು ಉಪಸ್ಥಿತರಿದ್ದರು.

ಇಂಡಿಯನ್ ಬುಕ್ ಆಫ್ ರೇಕಾರ್ಡ್
5 ಸಾವಿರ ಭಜನಾ ಕಾರ್ಯಕರ್ತರಿಂದ ಏಕಕಾಲದಲ್ಲಿ ಒಂದೆ ರೀತಿಯಲ್ಲಿ ಸುಮಾರು 45 ನಿಮಿಷ ನಿರಂತರ ನಡೆಯಲಿದ್ದು, ಇಂತಹ ಕಾರ್ಯಕ್ರಮ ಪ್ರಥಮವಾಗಿರುವ ಹಿನ್ನೆಲೆಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ದಾಖಲೆ ಆಗುವ ಸಾಧ್ಯತೆ ಬಹುತೇಕವಿದ್ದು ಈ ನಿಟ್ಟಿನಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನ ಸಂಸ್ಥೆಯಿಂದ ಇಬ್ಬರು ಪ್ರತಿನಿಧಿಗಳು, ತೀರ್ಪುಗಾರರು ಆಗಮಿಸಲಿದ್ದು, ಭಜನಾ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ ಎಂದು ಭಜನಾ ಸಂಭ್ರಮದ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಅವರು ತಿಳಿಸಿದರು.