ಬೆಂಗಳೂರು: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಿದ್ಧಿಗಾಗಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಕಳೆದ ಆರು ತಿಂಗಳಿನಿಂದ ಗಿರಿನಗರ ರಾಮಾಶ್ರಮಲ್ಲಿ ಅನುಗ್ರಹಿಸುತ್ತಿದ್ದ ಧಾರಾ ರಾಮಾಯಣದ ಮಹಾಮಂಗಲ ಮತ್ತು ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ಈ ತಿಂಗಳ 15ರಂದು ಭಾನುವಾರ ನಡೆಯಲಿದೆ.
ನಿರಂತರ ಆರು ತಿಂಗಳ ಕಾಲ ಸಮಗ್ರ ವಾಲ್ಮೀಕಿ ರಾಮಾಯಣದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದ್ದು, ಪ್ರತ್ಯಕ್ಷವಾಗಿ ಹಾಗೂ ಜಾಲತಾಣ, ನೇರ ಪ್ರಸಾರ ವಾಹಿನಿಗಳ ಮೂಲಕ 50 ಲಕ್ಷಕ್ಕೂ ಅಧಿಕ ಮಂದಿ ಪ್ರವಚನಾಮೃತ ಸವಿದಿದ್ದಾರೆ. ರಾಮಾಯಣ ಅನುಸಂಧಾನದ ಜತೆಗೆ ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅಗತ್ಯತೆಯನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವುದು ಪ್ರವಚನದ ಉದ್ದೇಶವಾಗಿತ್ತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2020ರ ಏಪ್ರಿಲ್ 26ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆ ಹೇಳಿದೆ.
ಧಾರಾ ರಾಮಾಯಣ ಆರಂಭಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು, ರಾಮರಾಜ್ಯ ಸ್ಥಾಪನೆಯ ಮಹತ್ ಸಂಕಲ್ಪ ಸಿದ್ಧಿಗಾಗಿ ಹಾಗೂ ವಿವಿವಿ ಸ್ಥಾಪನೆಯ ಉದ್ದೇಶದಿಂದ ಅಖಂಡ ವಾಲ್ಮೀಕಿ ರಾಮಾಯಣ ಪ್ರವಚನ ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಸ್ವಾಮೀಜಿಯವರ ಆಶಯದಂತೆ, ಯುದ್ಧಕಾಂಡ ಪ್ರವಚನ ನಡೆಯುತ್ತಿರುವ ಸಂದರ್ಭದಲ್ಲೇ, ನನೆಗುದಿಗೆ ಬಿದ್ದಿದ್ದ ಅಯೋಧ್ಯೆಯ ಭೂವಿವಾದವನ್ನು ಸುಪ್ರೀಂಕೋರ್ಟ್ ಬಗೆಹರಿಸಿ ಐತಿಹಾಸಿಕ ತೀರ್ಪು ನೀಡುವ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಇದ್ದ ವಿಘ್ನಗಳು ನಿವಾರಣೆಯಾಗಿರುವುದು ಕಾಕತಾಳೀಯ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುವಂತೆ, ರಾಮರಾಜ್ಯದ ಮುಕುಟಮಣಿಯಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ತಲೆ ಎತ್ತಲಿದೆ. ದೇಶದ ಸಂಸ್ಕøತಿ- ಪರಂಪರೆಯ ಪುನರುತ್ಥಾನದ ನಿಟ್ಟಿನಲ್ಲಿ ತಕ್ಷಶಿಲೆಯ ಪುನರವತರಣ ಎನಿಸಿದ ವಿವಿವಿ ಮೈಲುಗಲ್ಲಾಗಲಿದೆ ಎಂದು ಸ್ವಾಮೀಜಿಯವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಪಟ್ಟಾಭಿಷೇಕ
ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಬೆಳಿಗ್ಗೆ 7.30ರಿಂದಲೇ ಆರಂಭಗೊಳ್ಳಲಿವೆ. ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಗಣಪತಿಪೂಜೆ, ಪುಣ್ಯಾಹವಾಚನ, ಶ್ರೀಕರಾರ್ಚಿತ ಪೂಜೆ, ಷೋಡಷೋಪಚಾರ ಪೂಜೆ, ಕಲಶ ಪ್ರತಿಷ್ಠೆಯ ಬಳಿಕ ಸ್ವಾಮೀಜಿಯವರಿಂದ ಒಂದು ಗಂಟೆ ಕಾಲ ಧಾರಾ ರಾಮಾಯಣ ಪ್ರವಚನ ಕಾರ್ಯಕ್ರಮ ಇರುತ್ತದೆ. ಪ್ರವಚನದ ನಡುವೆಯೇ ರಾಮಚಂದ್ರಾಪುರ ಮಠದ ಆರಾಧ್ಯ ದೇವರಾದ ಶ್ರೀರಾಮನಿಗ ಮಹಾಭಿಷೇಕ, ಸಲಕ ತೀರ್ಥಾಭಿಷೇಕ, ಧಾನ್ಯ ಜಲಾಭಿಷೇಕ, ವನಸ್ಪತಿ ಜಲಾಭಿಷೇಕ, ದಿವ್ಯ ಗಂಧಾಭಿಷೇಕ, ನವರತ್ನಾಭಿಷೇಕ, ಸುವರ್ಣಾಭಿಷೇಕ ಮತ್ತು ರಜತಾಭಿಷೇಕ ನಡೆಯಲಿದೆ.
ಬೆಳಿಗ್ಗೆ 11ಕ್ಕೆ ಸರಿಯಾಗಿ ಕಿರೀಟ ಧಾರಣೆ, ಆಭರಣ ಧಾರಣೆ, ಮಂಗಲ ನೀರಾಜನ, ರಾಜೋಪಚಾರ ಸೇವೆ, ಪಟ್ಟಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಧರ್ಮ ಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಯಜಮಾನರು, ಶ್ರೀಪರಿವಾರ, ಸನ್ನಿಧಿ ಸಂಸ್ಥೆಗಳು, ಶಾಸನತಂತ್ರ ಪದಾಧಿಕಾರಿಗಳು ಮತ್ತು ಅಂಗಸಂಸ್ಥೆಗಳಿಂದ ಶ್ರೀರಾಮನಿಗೆ ಕಪ್ಪ ಸಲ್ಲಿಕೆ ನಡೆಯಲಿದೆ. ಶ್ರೀಮಠದ ಸಾವಿರಾರು ಮಂದಿ ಶಿಷ್ಯ-ಭಕ್ತರು ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.