Wednesday, November 27, 2024
ಸುದ್ದಿ

ಫಿಲೋಮಿನಾದಲ್ಲಿ ‘ವಿಸ್ಮಯ ವಿಶ್ವ’ ಖಗೋಳಶಾಸ್ತ್ರ ಕಾರ್ಯಾಗಾರದ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ವಿಜ್ಞಾನ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ವಿನೂತನ ಸನ್ನಿವೇಶಗಳು ಕಂಡು ಬರುತ್ತವೆ. ವಿಜ್ಞಾನದ ವಿಸ್ಮಯಗಳನ್ನು ಅರಿಯುವ ಕುತೂಹಲ ನಮ್ಮಲ್ಲಿ ಅಡಗಿದಾಗ ಅಧ್ಯಯನವು ಪರಿಪೂರ್ಣತೆಯನ್ನು ಹೊಂದುತ್ತದೆ ಎಂದು ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗ, ಐಕ್ಯೂಎಸಿ ಘಟಕ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು, ಮಂಗಳೂರು ವಿವಿ ಭೌತಶಾಸ್ತ್ರ ಅಧ್ಯಾಪಕರ ಸಂಘ ಮತ್ತು ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 13ರಂದು ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ‘ವಿಸ್ಮಯ ವಿಶ್ವ’ ಖಗೋಳಶಾಸ್ತ್ರ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು. ಖಗೋಳ ವಿಜ್ಞಾನದ ಅಧ್ಯಯನದ ವ್ಯಾಪ್ತಿ ಬೃಹದಾಕಾರವನ್ನು ಹೊಂದಿದೆ. ಭೂಮಿ, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ ಮೊದಲಾದ ವಿಷಯಗಳ ಕುರಿತು ದಿನಂಪ್ರತಿ ತಿಳಿದುಕೊಳ್ಳುವಷ್ಟು ವಿಷಯಗಳಿವೆ. ಗೆಲಿಲಿಯೋ, ಅರಿಸ್ಟಾಟಲ್‍ರಂತಹ ವಿಜ್ಞಾನ ರಂಗದ ಅತ್ಯದ್ಭುತ ಸಾಧಕರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಧನೆಗಳು ದಿನಾ ಪ್ರಸ್ತುತವೇ ಆಗಿದೆ ಎಂದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಮಾತನಾಡಿ, ವಿಜ್ಞಾನವು ಅದ್ಭುತಗಳನ್ನು ಸೃಷ್ಟಿ ಮಾಡಬಲ್ಲುದು. ಮಕ್ಕಳು ವಿಜ್ಞಾನ ರಂಗದ ವಿಸ್ಮಯಗಳನ್ನು ಅರಿತುಕೊಳ್ಳುವ ವಿಶೇಷ ಮನೋಗುಣ ಹೊಂದಿರಬೇಕು. ಇದು ವೈಜಾನಿಕ ಬೆಳವಣಿಗೆಗೆ ಎಡೆಮಾಡಿಕೊಡುತ್ತದೆ ಎಂದರು.
ಕಾರ್ಯಾಗಾರದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ರೋಟರಿ ಕ್ಲಬ್ ಪುತ್ತೂರು-ಪೂರ್ವ ಇದರ ಅಧ್ಯಕ್ಷ ಡಾ| ಶ್ಯಾಮ್ ಪ್ರಸಾದ್ ಮಾತನಾಡಿ, ಕಲಿಕೆಗೆ ವಯಸ್ಸಿನ ಇತಿಮಿತಿಯಿಲ್ಲ. ಅಧ್ಯಯನಕ್ಕೆ ಪೂರಕ ಮನಃಸ್ಥಿತಿ ಬಹಳ ಅನಿವಾರ್ಯ. ಗೂಗಲ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ದೊರಕುವ ಮಾಹಿತಿಗಳು ಪರಿಪೂರ್ಣವಾಗಿರಬೇಕಾಗಿಲ್ಲ. ಕೆಲವೊಂದು ಬಾರಿ ಅವು ನಮ್ಮೆಲ್ಲರ ದಾರಿ ತಪ್ಪಿಸಲೂ ಬಹುದು. ಪುಸ್ತಕಗಳನ್ನು ಓದಿ ಪಡೆಯುವ ಮಾಹಿತಿ ಪರಿಪೂರ್ಣವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಇತ್ತಿಚ್ಛೆಗಿನ ದಿನಗಳಲ್ಲಿ ಖಗೋಳಶಾಸ್ತ್ರವು ಬಹಳಷ್ಟು ಪ್ರಖ್ಯಾತಿಯನ್ನು ಪಡೆಯುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸನ್ನಿವೇಶಗಳನ್ನು ಅರಿತುಕೊಳ್ಳುವಲ್ಲಿ ಯುವ ಜನತೆ ವಿಶೇಷ ಆಸಕ್ತಿ ಹೊಂದಿರಬೇಕು. ಆಕಾಶದಲ್ಲಿ ಹಾರುವ ವಿಮಾನದ ಸದ್ದು ಕೇಳಿದಾಗ ಅದರ ಬಗ್ಗೆ ತಿಳಿದುಕೊಳ್ಳಲು ಮಗುವಿನ ತರಹ ಕುತೂಹಲ ನಮ್ಮಲ್ಲಿ ಅಡಗಿರಬೇಕು ಎಂದರು.
ವಿಜ್ಞಾನ ವಿದ್ಯಾರ್ಥಿನಿ ಲಾವಣ್ಯ ಪ್ರಾರ್ಥಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ ಪಿ ರಾಧಾಕೃಷ್ಣ ಸ್ವಾಗತಿಸಿದರು. ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕ ಡಾ| ಇ ದೀಪಕ್ ಡಿ’ಸಿಲ್ವ ವಂದಿಸಿದರು. ಸಹ ಪ್ರಾಧ್ಯಾಪಕ ಡಾ| ಕೆ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಆಯೋಜನೆಗೊಂಡ ಗೋಷ್ಠಿಗಳು: ಒಂದು ದಿನದ ಈ ಕಾರ್ಯಗಾರದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ| ಎ ಪಿ ಭಟ್ ಮತ್ತು ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ‘ಗ್ರಹಣವೆಂಬ ವಿಸ್ಮಯ’, ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಚ್ ಜಯಂತ ‘ಆಕಾಶ ಅರಿವು’, ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ ಪಿ ರಾಧಾಕೃಷ್ಣ ‘ವಿಸ್ಮಯ ವಿಶ್ವ’, ಸೇಫ್ಟಿ ಅದಾನಿ ವಿಲ್ಮರ್ ಲಿಮಿಟೆಡ್‍ನ ಅಸಿಸ್ಟೆಂಟ್ ಮೆನೇಜರ್ ನವೀನ ಚಂದ್ರ ‘ಖಗೋಳ ವಿಜ್ಞಾನ ಮಾದರಿ ತಯಾರಿ ಮತ್ತು ಉಪಕರಣಗಳು’ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಜಗನ್ನಾಥ ‘ಪ್ಲಾನೆಟೋರಿಯಮ್ ಚಟುವಟಿಕೆಗಳು’ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿಷಯ ಮಂಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು