ಬಡಕುಟುಂಬವೊಂದು ದಿನವೊಂದಕ್ಕೆ 20 ಸಿಲಿಂಡರ್ ಬಳಸಲು ಸಾಧ್ಯವೇ?: ಸಿಎಜಿ ವರದಿಯಲ್ಲಿದೆ ಆಘಾತಕಾರಿ ಮಾಹಿತಿ-ಕಹಳೆ ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಬಡವರಿಗೆ ಅಡುಗೆ ಅನಿಲ ನೀಡುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ದುರ್ಬಳಕೆ ಆಗುತ್ತಿರುವುದಾಗಿ ಸಿಎಜಿ (ಕಂಟ್ರೋಲರ್ ಆಯಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ವರದಿ ಮಾಡಿದೆ.
ದಿನವೊಂದರಲ್ಲಿ ಒಬ್ಬರೇ ಫಲಾನುಭವಿಯಿಂದ ಹಲವು ಬಾರಿ ರೀಫಿಲ್ ಆಗಿರುವ ಪ್ರಕರಣ ಸಿಎಜಿ ವರದಿಯಿಂದ ಬೆಳಕಿಗೆ ಬಂದಿದೆ. 2 ರಿಂದ 20 ಎಲ್ಪಿಜಿ ಸಿಲಿಂಡರ್ ಅನ್ನು ಒಂದು ದಿನದಲ್ಲಿ ಒಬ್ಬರೇ ಫಲಾನುಭವಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವಿತರಿಸಲಾಗಿರುವ 3.44 ಲಕ್ಷ ಉದಾಹರಣೆಗಳು ಕಂಡುಬಂದಿದೆ.
ಇದಲ್ಲದೆ, ಹೆಚ್ಚಿನ ಬಳಕೆಯ ಕುಟುಂಬಗಳಲ್ಲಿ ತಿಂಗಳಲ್ಲಿ 3 ರಿಂದ 9 ಬಾರಿ ರಿಫೀಲ್ ಆಗಿರುವ 19.8 ಲಕ್ಷ ಉದಾಹರಣೆಗಳು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ, ದೈನಂದಿನ ಹೆಚ್ಚಿನ ಬಳಕೆಯು ಸಾಮಾನ್ಯ ಗ್ರಾಹಕರಲ್ಲಿ ಸಾಧ್ಯವಿಲ್ಲದಿರುವುದರಿಂದ ಗೃಹ ಬಳಕೆಗಾಗಿ ನೀಡಲಾಗಿರುವ ಎಲ್ಪಿಜಿ ಸಂಪರ್ಕವು ವಾಣಿಜ್ಯಕ್ಕೆ ಬಳಕೆಯಾಗಿದೆ ಎಂದು ಸಿಎಜಿ ಸಂಶಯ ವ್ಯಕ್ತಪಡಿಸಿದೆ. ಕಮರ್ಷಿಯಲ್ ಎಲ್ಪಿಜಿ ರೀಫಿಲ್ ದರ ಅತ್ಯಧಿಕ ತೆರಿಗೆಯಿಂದ ಹೊರೆಯಾಗಿರುವ ಕಾರಣ ಗೃಹಬಳಕೆಯ ಎಲ್ಪಿಜಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.
ಸಿಎಜಿ ವರದಿಗೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್, ಪ್ರತಿಯೊಂದು ಕುಟುಂಬದ ತಿನ್ನುವ ಮತ್ತು ಅಡುಗೆ ಮಾಡುವ ಹವ್ಯಾಸ ವಿಭಿನ್ನವಾಗಿದೆ. ಪ್ರತಿಯೊಂದು ಕುಟುಂಬವು ವಿಶೇಷವಾದ ಎಲ್ಪಿಜಿ ಬಳಕೆಯನ್ನು ಹೊಂದಿವೆ. ಹೀಗಾಗಿ ದಿನವೊಂದಕ್ಕೆ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಮಾಡಲು ಯಾವುದೇ ನಿಷೇಧವನ್ನು ಹೇರಿಲ್ಲ ಎಂದು ತಿಳಿಸಿದೆ. ಆದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಬುಕ್ಕಿಂಗ್ ಮಾಡುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿವೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕವನ್ನು ಒದಗಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016ರ ಮೇ ತಿಂಗಳಿನಲ್ಲಿ ಉದ್ಘಾಟನೆ ಮಾಡಲಾಯಿತು. ಹೊಗೆ ಮತ್ತು ಶುಚಿಯಲ್ಲದ ಇಂಧನದಿಂದ ಬಡವರನ್ನು ರಕ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಯಿತು. 2020ರ ಗಡುವಿಗೂ ಏಳು ತಿಂಗಳು ಮುಂಚೆಯೇ 8 ಕೋಟಿ ಜನರಿಗೆ ಹೊಸ ಎಲ್ಪಿಜಿ ಸಂಪರ್ಕ ಕೊಡಿಸುವ ಮೂಲಕ ಯೋಜನೆ ಯಶಸ್ಸು ಸಾಧಿಸಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. (ಏಜೆನ್ಸೀಸ್)