ಕೊಣಾಜೆ: ಒಂದೇ ಮನೆಯಿಂದ 40ಕ್ಕೂ ಅಧಿಕ ಗೋವುಗಳು ಕಳವು-ಗೋ ಪ್ರೇಮಿಗಳು ಈ ಬಡ ಮಹಿಳೆಗೆ ನ್ಯಾಯ ಒದಗಿಸಲು ಶ್ರಮಿಸಬೇಕಾಗಿದೆ-ಕಹಳೆ ನ್ಯೂಸ್
ಕೊಣಾಜೆ ಗ್ರಾಮದ ನಡುಪದವಿನ ಕಲ್ಯಾಣಿ ಎಂಬವರ ಮನೆಯ ಹಟ್ಟಿಯಿಂದ ಮತ್ತೆ ಗೋ ಕಳ್ಳತನ ನಡೆದಿದೆ. ಹಟ್ಟಿಗೆ ನುಗ್ಗಿರುವ ದುಷ್ಕರ್ಮಿಗಳು ನಾಲ್ಕು ದನಗಳನ್ನು ಕಳವುಗೈದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಈ ಬಗ್ಗೆ ಕಲ್ಯಾಣಿ ಅವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶುಕ್ರವಾರ ತಡರಾತ್ರಿ ದನಗಳ್ಳರು ಮನೆಯ ಮುಂಭಾಗದಲ್ಲಿ ಹಟ್ಟಿಗೆ ಯಾರಿಗೂ ಅರಿವಾಗದಂತೆ ನುಗ್ಗಿ ನಾಲ್ಕು ದನಗಳನ್ನು ಕದ್ದೊಯ್ದಿದ್ದಾರೆ ಎಂದು ಅವರು ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಕಲ್ಯಾಣಿ ಅವರು ಶನಿವಾರದಂದು ಬೆಳಿಗ್ಗೆ ಸುಮಾರು ೫.೩೦ರ ವೇಳೆಗೆ ಹಟ್ಟಿಗೆ ಬಂದ ಸಮಯದಲ್ಲಿ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಲ್ಯಾಣಿ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಲ್ಯಾಣಿ ಅವರು ಕಳೆದ ಹಲವಾರು ವರ್ಷಗಳಿಂದ ಹೈನುಗಾರಿಯ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಅವರು ಹಲವು ಗೋವುಗಳನ್ನು ಸಾಕಿದ್ದು ಇಲ್ಲಿಯವರೆಗೆ ಹಲವಾರು ದನಗಳನ್ನು ಕಳೆದುಕೊಂಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಇವರ ಮೇಯಲು ಬಿಟ್ಟ ದನವೊಂದು ಕಳವಾಗಿತ್ತು. ಕಳೆದ ಎರಡು ವರ್ಷದ ಹಿಂದೆ ಕೈರಂಗಳದ ಪುಣ್ಯಕೋಟಿನಗರದಲ್ಲಿ ನಡೆದ ಗೋ ಸಂತ್ರಸ್ತ್ರರ ಸಭೆಯಲ್ಲಿ ಕಲ್ಯಾಣಿಯವರು ಕಳೆದ 15 ವರ್ಷಗಳಿಂದ 35ಕ್ಕೂ ಹೆಚ್ಚು ದನಗಳನ್ನು ಕಳವುಗೈದಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಇದೀಗ ಇವರ ಮನೆಯಿಂದಲೇ ಶುಕ್ರವಾರ ರಾತ್ರಿ ದನಗಳನ್ನು ಕಳ್ಳತನ ಮಾಡಲಾಗಿದ್ದು ಇಲ್ಲಿಯವರೆಗೆ ಒಟ್ಟು ನಲ್ವತ್ತಕ್ಕೂ ಹೆಚ್ಚು ದನಗಳು ಕಳವಾಗಿವೆ. ಕಳೆದ ಹಲವಾರು ವರ್ಷಗಳಿಂದ ಪೊಲೀಸರಿಗೆ ದೂರು ನೀಡುತ್ತಾ ಬಂದಿದ್ದಾರೆ. ಆದರೆ ತಮಗೆ ಗೋವುಗಳು ವಾಪಸ್ಸು ಬಂದಿಲ್ಲ. ನ್ಯಾಯವೂ ಸಿಕ್ಕಿಲ್ಲ ಎಂದು ಕಲ್ಯಾಣಿಯವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಕೊಣಾಜೆ ಠಾಣೆಯ ಪೋಲೀಸರು, ರೌಡಿ ನಿಗ್ರಹ ದಳದ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಈ ಭಾಗದ ಸಿ.ಸಿ.ಕ್ಯಾಮರಾದ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಚುರುಕುಗೊಂಡಿದೆ
ಇನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕಲ್ಯಾಣಿಯವರ ಹಟ್ಟಿಯಿಂದ ಗೋವುಗಳು ಕಳವಾಗುತ್ತಿದ್ದರೂ ಕೂಡ ಯಾವುದೇ ರೀತಿಯ ಭದ್ರತೆಯನ್ನು ಇಲ್ಲಿ ಕಲ್ಪಿಸಲಾಗಿಲ್ಲ. ಇದೇ ಕಾರಣದಿಂದಾಗಿ ಘಟನೆ ಮತ್ತೆ ಮತ್ತೆ ಮರುಕಳಿಸುತ್ತಿದೆ. ಈ ಹಿಂದೆ ಕಳವುಗೈದವರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸದ ಹಿನ್ನೆಲೆ ಮತ್ತೆ ನಾಲ್ಕು ಗೋವುಗಳು ಕಳವುಗೈಯಲು ದುಷ್ಕರ್ಮಿಗಳು ಹಿಂದೇಟು ಹಾಕಿಲ್ಲ.
ಈ ಬಡ ಕುಟುಂಬಕ್ಕೆ ಇಲಾಖೆ ಸೂಕ್ತ ನ್ಯಾಯ ಒದಗಿಸಬೇಕಿದೆ. ನೈಜ ಗೋ ಪ್ರೇಮಿಗಳು ಈ ಬಡ ಮಹಿಳೆಗೆ ನ್ಯಾಯ ಒದಗಿಸಲು ಶ್ರಮಿಸಬೇಕಾಗಿದೆ. ಗೋ ಹತ್ಯೆ ವಿರುದ್ಧ ಹೋರಾಡುವ ಸಂಘಟನೆಗಳು ಈ ಕುಟುಂಬಕ್ಕೆ ನೆರವಾಗಬೇಕಾಗಿದ್ದು, ಮುಂದೆಂದು ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯತೆ ಇದೆ.