ದಾವಣಗೆರೆ: ನೂತನವಾಗಿ ಮೊಬೈಲ್ ಶೋರೂಂ ಪ್ರಾರಂಭಿಸಿದ ಹಿನ್ನಲೆ, ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಸಿಬಂದಿಗೆ ಬೆಳ್ಳಂಬೆಳಗ್ಗೆಯೇ ಆಘಾತ ಕಾದಿತ್ತು. 200 ರೂ. ಮೊಬೈಲ್ ಖರೀದಿಗೆ ಜನರು ಸರತಿ ಸಾಲಿನಲ್ಲಿ ಬಂದು ನಿಂತಿದ್ದರಿಂದ ಘರ್ಷಣೆ ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿದ ಘಟನೆ ನಡೆದಿದೆ.
ಹೌದು, ಆಶ್ಚರ್ಯವಾದರೂ ಸತ್ಯ, ದಾವಣಗೆರೆಯ ಅಶೋಕ ರಸ್ತೆಯಲ್ಲಿ ಖಾಸಗಿ ಮೊಬೈಲ್ ಶೋರೂಂನ ಐದನೇ ಶಾಖೆ ಶನಿವಾರ ಆರಂಭವಾಯಿತು. ಹಾಗಾಗಿ ಆರಂಭಿಕ ಕೊಡುಗೆಯಾಗಿ ಕೇವಲ 200 ರೂ.ಗೆ ಒಂದು ಕೀ ಪ್ಯಾಡ್ ಮೊಬೈಲ್, 200 ಮಂದಿಗೆ ನೀಡುವುದಾಗಿ ಶೋರೂಂನವರು ಆಫರ್ ನೀಡಿದ್ದರು. ವಿಷಯ ತಿಳಿದ ಜನರು ಬೆಳಗ್ಗೆಯಿಂದಲೇ ಮೊಬೈಲ್ ಖರೀದಿಗೆ ಸರದಿ ಸಾಲಿನಲ್ಲಿ ನಿಂತರು. ಮಾತ್ರವಲ್ಲದೆ ರಸ್ತೆಯಲ್ಲಿ ಹೋಗುವವರು ಕೂಡ ಜನರು ಕ್ಯೂ ನಿಂತಿದ್ದನ್ನು ಕಂಡು ತಾವೂ ಕೂಡ ಸರತಿ ಸಾಲಿಗೆ ಸೇರಿಕೊಂಡಿದ್ದಾರೆ. ಈ ಸಾಲಿನಲ್ಲಿ ಮಹಿಳೆಯರು ಇದ್ದದ್ದು ವಿಶೇಷ.
ಆದರೆ ನಾವು ಪ್ರಚಾರಕ್ಕೆ ಮಾತ್ರ ಕೊಡುತ್ತಿರುವುದು. ನಾವು ನೀಡುವ ಮೊಬೈಲ್ ಗೆ ಯಾವುದೇ ಗ್ಯಾರಂಟಿ ಮತ್ತು ವಾರಂಟಿ ಇರುವುದಿಲ್ಲ ಎಂದು ಶೋ ರೂಂನವರು ಹೇಳಿದರು ಜನದಟ್ಟಣೆ ಕರಗಲಿಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು.