Friday, November 29, 2024
ಸುದ್ದಿ

ಮುಲ್ಕಿಯಲ್ಲಿ ಒಂಟಿ ವೃದ್ಧೆಯ ಬರ್ಬರ ಕೊಲೆ : ಕೃತ್ಯ ನಡೆದ 8 ಗಂಟೆಯೊಳಗೆ ಆರೋಪಿ ಸೆರೆ-ಕಹಳೆ ನ್ಯೂಸ್

ಮುಲ್ಕಿ, ಡಿ.15: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿಮಂತೂರು ಪರೆಂಕಿಲ ಎಂಬಲ್ಲಿನ ಮನೆಯೊಂದರಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಶನಿವಾರ ಸಂಜೆ ನಡೆದಿದೆ. ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ರಚಿಸಿದ ಮೂರು ಪೊಲೀಸ್ ತಂಡಗಳು ಕೃತ್ಯ ನಡೆದ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರೆಂಕಿಲ ಮನೆಯ ‘ಮಾತೃಶ್ರೀನಿವಾಸ’ದ ಶಾರದಾ ಶೆಟ್ಟಿ (75)ಕೊಲೆಯಾದವರು. ಇವರನ್ನು ಅದೇ ಗ್ರಾಮದ ತುಕರಾಮ ಶೆಟ್ಟಿ ಯಾನೆ ಬೊಗ್ಗು (54) ಎಂಬಾತ ಕೊಲೆಗೈದು ತಲೆಮರೆಸಿಕೊಂಡರೂ ಕೂಡ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾರದಾ ಶೆಟ್ಟಿ ಈ ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ರವಿವಾರ ಬೆಳಗ್ಗೆ ಸ್ಥಳೀಯರೊಬ್ಬರು ಶಾರದಾ ಶೆಟ್ಟಿಯ ಮನೆಯ ಮುಂದಿನ ಕಾಲುದಾರಿಯಾಗಿ ಹೋಗುತ್ತಿದ್ದಾಗ ಕೊಲೆ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಶಾರದಾ ಶೆಟ್ಟಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಇವರ ಪುತ್ರಿ ಮುಂಬೈಯಲ್ಲಿ ವಾಸವಾಗಿದ್ದಾರೆ. 6 ತಿಂಗಳ ಹಿಂದೆ ಇವರ ಹೊಸ ಮನೆಯ ಗೃಹಪ್ರವೇಶವೂ ನಡೆದಿತ್ತು. ಶಾರದಾ ಶೆಟ್ಟಿ ಸಂಜೆ 7 ಗಂಟೆಗೆ ಮನೆಗೆ ಬೀಗ ಹಾಕಿ ಮಲಗುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಶನಿವಾರ ಸಂಜೆ 6ರಿಂದ 7 ಗಂಟೆಯ ಮಧ್ಯೆ ಕೊಲೆ ನಡೆದಿರಬೇಕು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ‘ಕೃತ್ಯ ನಡೆದ ತಕ್ಷಣ ಮೂವರು ಪೊಲೀಸ್ ಅಧಿಕಾರಿಗಳ ನೇತೃತ್ವದ ತನಿಖಾ ತಂಡವನ್ನು ರಚಿಸಿದೆ. ಅವರು ತನಿಖೆ ನಡೆಸಿದಾಗ ಶಾರದಾ ಶೆಟ್ಟಿಗೆ ಯಾರೂ ವೈರಿಗಳಿಲ್ಲ ಎಂಬುದು ಖಾತ್ರಿಯಾಯಿತು. ತನಿಖೆಯನ್ನು ಚುರುಕುಗೊಳಿಸಿದಾಗ ಅದೇ ಪರಿಸರದ ತುಕರಾಮ ಶೆಟ್ಟಿ ಯಾನೆ ಬೊಗ್ಗು ಎಂಬಾತನ ಮೇಲೆ ಸಂಶಯ ವ್ಯಕ್ತವಾಯಿತು. ಆತನನ್ನು ವಿಚಾರಿಸಿದಾಗ ಮನೆಯ ಮುಂದೆ ನಡೆದ ಕಾಮಗಾರಿಗೆ ಸಂಬಂಧಿಸಿ ಶಾರದಾ ಶೆಟ್ಟಿಯೊಂದಿಗೆ ಮನಸ್ತಾಪ ಹೊಂದಿ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆ ಮೂಲಕ ಮೂರು ಪೊಲೀಸ್ ತಂಡಗಳು ಕೃತ್ಯ ನಡೆದ 8 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದಿದ್ದಾರೆ.

ಶಾರದಾ ಶೆಟ್ಟಿಯ ಮನೆಗೆ ತಾಗಿಕೊಂಡೇ ಮನೆಯ ದೈವಸ್ಥಾನವಿದ್ದು ದೈವಗಳಿಗೆ ಸಂಜೆ ವೇಳೆಗೆ ದೀಪ ಹಚ್ಚಲು ಹೋಗುವಾಗ ಹಿಂದಿನಿಂದ ಆರೋಪಿ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ನಡೆಸಿ, ಮನೆ ಸಮೀಪದ ಬಾವಿಗೆ ತಳ್ಳಿರಬೇಕು ಎಂದು ಶಂಕಿಸಲಾಗಿದೆ. ಶವದ ಮೇಲೆ ಪ್ಲಾಸ್ಟಿಕ್ ಚೀಲ ಹಾಗೂ ತೆಂಗಿನ ಗರಿಗಳಿಂದ ಮುಚ್ಚಿಡಲಾಗಿದೆ. ಮನೆಯ ಎದುರಿನಲ್ಲಿ ಶವವನ್ನು ಎಳೆದುಕೊಂಡು ಹೋದ ಕುರುಹುಗಳಿವೆ. ಆದರೆ ಮನೆಯ ಒಳಗಿನ ಯಾವುದೇ ಚಿನ್ನಾಭರಣಗಳು ಕಳವಾದ ಬಗ್ಗೆ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಡಿಸಿಪಿಗಳಾದ ಲಕ್ಷ್ಮಿಗಣೇಶ್, ಅರುಣಾಂಶುಗಿರಿ, ಎಸಿಪಿ ಶ್ರೀನಿವಾಸ ಗೌಡ, ಮುಲ್ಕಿ ಸಿಐ ಜಯರಾಮ ಗೌಡ ಹಾಗೂ ಜಿಲ್ಲಾ ಶ್ವಾನದಳ, ಬೆರಳಚ್ಚು ತಜ್ಞರು, ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿ ಸಾಕ್ಷಿ ಕಲೆ ಹಾಕಿದ್ದಾರೆ.

ಘಟನೆ ನಡೆದ 8 ಗಂಟೆಯೊಳಗೆ ಪೊಲೀಸ್ ತಂಡವು ಆರೋಪಿಯನ್ನು ಬಂಧಿಸಿರುವ ಸಾಹಸದ ಬಗ್ಗೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.