ಮೈಸೂರು, ಡಿಸೆಂಬರ್ 16: ಮೈಸೂರು ಮೃಗಾಲಯದಿಂದ ಅಸ್ಸಾಂ ರಾಜ್ಯದ ಗುವಾಹಟಿಗೆ ಜಿರಾಫೆ ಸಾಗಿಸಿದ ಬೆನ್ನಲ್ಲೇ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.
ಪ್ರಾಣಿ ವಿನಿಮಯ ಯೋಜನೆಯಡಿ ದಾಖಲೆ ನಿರ್ಮಿಸಿದ ಮೈಸೂರು ಮೃಗಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಬರೋಬ್ಬರಿ 3,200 ಕಿ.ಮೀ. ದೂರಕ್ಕೆ ಜಿರಾಫೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಬಹು ದೂರಕ್ಕೆ ಪ್ರಾಣಿಯನ್ನು ಸಾಗಿಸಿದ ಹೆಗ್ಗಳಿಕೆಗೆ ಮೈಸೂರು ಮೃಗಾಲಯ ಪಾತ್ರವಾಗಿತ್ತು.
ಇದೀಗ ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಮೃಗಾಲಯಕ್ಕೆ ಘೇಂಡಾಮೃಗ, ಕರಿಚಿರತೆ, ಹೂಲಾಕ್ ಗಿಬ್ಬನ್ ಹೊಸದಾಗಿ ಬಂದಿವೆ. ಇದರಿಂದಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ವಿಶೇಷ ಆಕರ್ಷಣೆ ಬಂದಿದೆ.
ಹೊಸದಾಗಿ ಬಂದಿರುವ ಪ್ರಾಣಿಗಳನ್ನು 15 ದಿನಗಳ ಕಾಲ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇರಿಸಿದ ಬಳಿಕ ಕ್ರಿಸ್ಮಸ್ ಹೊತ್ತಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಲಾಗುವುದು ಎಂದು ಮೃಗಾಲಯದ ಕಾರ್ಯಪಾಲಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.