ಬೆಂಗಳೂರು, ಡಿಸೆಂಬರ್ 16: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಯರ್ ಕುಡಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಬಕಾರಿ ಇಲಾಖೆ ತನಿಖೆಗೆ ಆದೇಶ ನೀಡಿದೆ.
ಬಿಯರ್ ಮಾರಾಟದ ಪ್ರಮಾಣ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿತ್ತು, ಆದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಾರಾಟ ಪ್ರಮಾಣ ಏರಿಕೆಯಾಗಿಲ್ಲದಿರುವುದು ಇಲಾಖೆಗೆ ತಲೆನೋವು ತರಿಸಿದೆ.
ಈ ಲೇಖನ ಓದಿದ ಮೇಲೆ ಕುಡೀಬೇಕಾ, ಕುಡಿಯೋದ್ ಬೇಡ್ವಾ? ನಿರ್ಧಾರ ಮಾಡಿ
ಹೀಗಾಗಿ ಇದರ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಅಬಕಾರಿ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಅಬಕಾರಿ ಆಯುಕ್ತರು ಆದೇಶ ನೀಡಿದ್ದಾರೆ.
ಬಿಯರ್ ಮಾರಾಟದ ಪ್ರಮಾಣ ಮತ್ತು ಅದರ ಶೇಕಡಾವಾರು ಬೆಳವಣಿಗೆ ಕುಂಠಿತವಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಮಾರಾಟ ಕಡಿಮೆಯಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಬೇಕು ಮತ್ತು ಕೂಲಂಕಷವಾಗಿ ವಿಶ್ಲೇಷಣೆ ಮಾಡಿ ಗುರಿ ಸಾಧಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ವರದಿ ಕೊಡುವಂತೆ ಇಲಾಖೆ ತಿಳಿಸಿದೆ.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ, ಹೀಗಾಗಿ ಹೇಗೆ ಮಾರಾಟವಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಅಬಕಾರಿ ಇಲಾಖೆ ಬರೀ ಮದ್ಯ ಮಾತ್ರ ಪೂರೈಕೆ ಮಾಡುತ್ತದೆ, ಅದರಲ್ಲಿ ಅಧಿಕ ಲಾಭವಿರುತ್ತದೆ. ಬಿಯರ್ ನಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ, ಹಾಗಾಗಿ ಬಿಯರ್ ಪೂರೈಕೆ ಮಾಡುತ್ತಿಲ್ಲ, ನಾವು ಬಿಯರ್ ಪೂರೈಕೆಗೆ ಕೇಳಿಕೊಂಡರೂ ಕಳುಹಿಸತ್ತಿರಲಿಲ್ಲವೆಂದು ಬಾರ್ ಮಾಲೀಕರು ಹೇಳಿದ್ದಾರೆ.