Recent Posts

Sunday, January 19, 2025
ಸುದ್ದಿ

ಕವಯತ್ರಿ ಅಶ್ವಿನಿ ಕೋಡಿಬೈಲುರವರ ಸೌಗಂಧಿಕಾ ಕವನ ಸಂಕಲನ ಲೋಕಾರ್ಪಣೆ – ಕಹಳೆ ನ್ಯೂಸ್

ಸುಳ್ಯ: ಸಾಹಿತ್ಯ ವಲಯದಲ್ಲಿ ಇಂದು ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಅಲ್ಲೊಬ್ಬರು ಇಲ್ಲೊಬ್ಬರು ದೊರಕಿದರೂ ಸಹ ಕೊಂಡು ಓದುವವರಿಗಿಂತ ಕಂಡು ಓದುವವರೇ ಹೆಚ್ಚು. ಪ್ರತಿಭಾನ್ವಿತ ಸಾಹಿತಿಗಳು ಅಪರೂಪವಾಗುತ್ತಿರುವ ಇಂತಹ ಸಂದರ್ಭದಲ್ಲಿ ಒಮ್ಮೊಮ್ಮೆ ಬೆಳಕಿಗೆ ಬರುವ ಸಹೃದಯ ಸಾಹಿತಿಗಳನ್ನು ಬೆನ್ನುತಟ್ಟುವ, ಪ್ರೋತ್ಸಾಹಿಸುವ ಅವರ ಬೆಳವಣಿಗೆಯನ್ನು ಮೆಚ್ಚಿಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಇಂತಹ ಸಾಹಿತಿಗಳ ಕೃತಿಗಳನ್ನು ಕೊಂಡು ಓದಿದಲ್ಲಿ ಅವರ ಪ್ರತಿಭೆಗಳಿಗೆ ಕಿಂಚಿತ್ತಾದರೂ ಪ್ರೋತ್ಸಾಹ ದೊರಕಿದಂತಾಗುವುದೆಂದು ಪ್ರೊ|| ವಿ. ಬಿ. ಅರ್ತಿಕಜೆ ನುಡಿದರು.

ಅವರು ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಡಾ| ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಭರವಸೆಯ ಕವಯತ್ರಿ ಶ್ರೀಮತಿ ಅಶ್ವಿನಿ ಕೋಡಿಬೈಲು ರವರ ಸೌಗಂಧಿಕಾ ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಅವರು ದೃಶ್ಯಮಾಧ್ಯಮಗಳ,ಮೊಬೈಲ್ ಗಳ ಅತಿಯಾದ ಬಳಕೆಯಿಂದ ಸಾಹಿತ್ಯ, ಸಂಗೀತದ ಕಡೆಗೆ ಒಲವು ಕಡಿಮೆ ಆಗುತ್ತಿರುವ ಸಂದರ್ಭದಲ್ಲಿಯೂ ಒಬ್ಬ ಗೃಹಿಣಿಯಾಗಿ ಮನೆ , ಸಂಸಾರ, ಮಕ್ಕಳು ಇವೆಲ್ಲವನ್ನೂ ಅಚ್ಚುಕಟ್ಟಾಗಿ ನೋಡಿಕೊಂಡು ಸಾಹಿತ್ಯದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮುಖೇನ ಸೌಗಂಧಿಕಾ ಎನ್ನುವ ಉತ್ಕೃಷ್ಟ ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಅಶ್ವಿನಿ ಕೋಡಿಬೈಲು ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯ ಮತ್ತು ಗುರು ತಮ್ಮ ಕಾರ್ಯ ಮುಗಿದ ಮೇಲೆ ನಿಷ್ಪ್ರಯೋಜಕರು ಎಂದೇ ಭಾವಿಸುವ ಅದೆಷ್ಟೋ ಜನರ ಮಧ್ಯದಲ್ಲಿ ಗುರುವನ್ನು ಗೌರವಿಸುವ ಸಹೃದಯರು ಇದ್ದಾರೆ ಎನ್ನುವುದಕ್ಕೆ ಅಶ್ವಿನಿ ಕೋಡಿಬೈಲು ರವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಅದಕ್ಕೆ ಅವರ ಸಹೃದಯತೆಯೇ ಕಾರಣ ಎಂದು ದೀಪಬೆಳಗಿ ಉದ್ಘಾಟಿಸಿದ ಶಿರಂಕಲ್ಲು ಕೃಷ್ಣ ಭಟ್ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಭೆ ಇದ್ದಲ್ಲಿ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಅಂತಹ ಪ್ರತಿಭಾನ್ವಿತೆಯನ್ನ ಪರಿಚಯಿಸಿದ ಮತ್ತು ಅವರ ಸತ್ವಪೂರ್ಣ ಕವನಗಳನ್ನು ಒಳಗೊಂಡ ಸಂಕಲನವನ್ನು ಹೊರತಂದಿರುವ ತೃಪ್ತಿ ನಮ್ಮದಾಗಿದೆ ಎಂದು ಸೌಗಂಧಿಕಾ ಕವನ ಸಂಕಲನವನ್ನು ಪ್ರಕಾಶಿಸಿದ ಶರಣುದುರ್ಗಾ ಪ್ರಕಾಶನ ಭಟ್ಕಳ ಇದರ ಪ್ರಕಾಶಕರು ಮತ್ತು ಉ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಉಮೇಶ ಮುಂಡಳ್ಳಿಯವರು ನುಡಿದರು.

ಕಾರ್ಯಕ್ರಮದಲ್ಲಿ ಸದಾಶಿವ ಭಟ್ ಶಿವಗಿರಿ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀವೆಂಕಟರಮಣ ದೇವಸ್ಥಾನ ಬೆಳ್ಳಾರೆ ಇದರ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶಾನುಭಾಗರು ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಪ್ರೊ| ವಿ.ಬಿ.ಅರ್ತಿಕಜೆಯವರನ್ನ ಅಶ್ವಿನಿ ಕೋಡಿಬೈಲು ದಂಪತಿಗಳು ಫಲತಾಂಬೂಲವನ್ನಿತ್ತು ಶಾಲು ಹೊದೆಸಿ ಸನ್ಮಾನಿಸಿದರು.

ಸಭಾಕಾರ್ಯಕ್ರಮದ ನಂತರ ನಿನಾದ ಸಾಹಿತ್ಯ ಸಂಗೀತ ಸಂಚಯದ ಸುಗಮಸಂಗೀತ ಗಾಯಕರಾದ ಉಮೇಶ ಮುಂಡಳ್ಳಿ ಭಟ್ಕಳ ಹಾಗೂ ಬಳಗದವರಿಂದ ಸ್ವರಚಿತ ಮತ್ತು ಅಶ್ವಿನಿ ಕೋಡಿಬೈಲು ಅವರ ಭಾವಗೀತೆಗಳ ಸುಗಮಸಂಗೀತ ಕಾರ್ಯಕ್ರಮ ನಡೆಯಿತು.

ರಾಮಚಂದ್ರ ಕೋಡಿಬೈಲು ಸ್ವಾಗತಿಸಿದರು. ಕವಯತ್ರಿ ಅಶ್ವಿನಿ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತಾನಾಡಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮವನ್ನು ಪ್ರದೀಪ್ ಕುಮಾರ್ ರೈ ಪನ್ನೆ ನಿರ್ವಹಿಸಿದರು. ಅವನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ವರದಿ : ಕಹಳೆ ನ್ಯೂಸ್