ಯಾದಗಿರಿ, ಡಿಸೆಂಬರ್ 19 : ಯಾದಗಿರಿ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ದಾಳಿಗಳನ್ನು ನಡೆಸಿದ್ದು ಕೆಲಸ ಮಾಡುತ್ತಿದ್ದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಗುಂಜನೂರ, ಚಲ್ಹೇರಿ, ಜೈಗ್ರಾಮ, ನಂದೆಪಲ್ಲಿ, ಸಂಕ್ಲಾಪುರ ಹಾಗೂ ಇತರೆ ಗ್ರಾಮಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಹತ್ತಿ ಬಿಡಿಸುತ್ತಿದ್ದ ಮಕ್ಕಳನ್ನು ಶಾಲೆಯ ಮೆಟ್ಟಿಲು ಹತ್ತಿಸಿದ್ದಾರೆ.
ರಾಯಚೂರು: ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 6 ಬಾಲ ಕಾರ್ಮಿಕರ ರಕ್ಷಣೆ
ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹತ್ತಿ ಹೊಲಗಳ ಮೇಲೆ ದಿಢೀರ್ ದಾಳಿ ನಡೆಸಿದರು. ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪತ್ತೆಯಾದ 6 ರಿಂದ 18 ವರ್ಷದೊಳಗಿನ ಮಕ್ಕಳ ವರದಿ ಪಡೆದು ಅವರನ್ನು ಶಾಲೆಗೆ ಸೇರಿಸಿದ್ದಾರೆ.
ಪೌರ ಕಾರ್ಮಿಕ ಕೆಲಸಕ್ಕೆ ಅರ್ಜಿ ಹಾಕಿದ 7000 ಎಂಜಿನಿಯರ್ ಪದವೀಧರರು!
ಅಧಿಕಾರಿಗಳು ದಾಳಿ ನಡೆಸಿದಾಗ ಟಂಟ0, ಟಾಟಾ ಏಸ್, ಜೀಪ್ ವಾಹನಗಳಲ್ಲಿ ಕೆಲಸಕ್ಕೆ ಜನರನ್ನು ಕರೆದುಕೊಂಡು ಹೋಗುತ್ತಿರುವುದು ತಿಳಿದು ಬಂದಿದೆ. ವಾಹನಗಳನ್ನು ತಡೆಹಿಡಿದು ವಿಚಾರಣೆಗೆ ಒಳಪಡಿಸಿದ ಅದರಲ್ಲಿ ಮಕ್ಕಳು ಸಹ ಇರುವ ಮಾಹಿತಿ ಸಿಕ್ಕಿದೆ.
ಪೊಲೀಸ್ ಇಲಾಖೆಯವರು ಎಲ್ಲಾ ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದು ವಾಹನಕ್ಕೆ ದಂಡ ಹಾಕಿದ್ದಾರೆ. 1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಬಂಧಿಸಿದ ವಾಹನ ಚಾಲಕರಿ ಚಾಲನಾ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ್ ಠಾಕೂರ್ ಈ ಕುರಿತು ಮಾಹಿತಿ ನೀಡಿದ್ದು, “ಅಧಿಕಾರಿಗಳು ತನಿಖಾ ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದರು.
ತನಿಖಾ ತಂಡಗಳು ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಗ್ಯಾರೇಜ್, ಬಾರ್, ಅಂಗಡಿ ಹಾಗೂ ಇನ್ನಿತರ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆಬಿಟ್ಟ ಮಕ್ಕಳನ್ನು ಪತ್ತೆ ಹಚ್ಚುತ್ತಿದ್ದಾರೆ.
ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಬಾಲ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಬಿಟ್ಟ ಮಕ್ಕಳನ್ನು ನೇರವಾಗಿ ಕಡ್ಡಾಯ ಶಿಕ್ಷಣ ಕಾಯ್ದೆ -2009ರ ಅನ್ವಯ ಶಿಕ್ಷಣ ಇಲಾಖೆ ವತಿಯಿಂದ ಸರ್ವ ಶಿಕ್ಷಣ ಅಭಿಯಾನಡಿ ಸಂಬಂಧಿಸಿದ ಶಾಲಾ ಮುಖ್ಯಗುರುಗಳ ಮೂಲಕ ಹತ್ತಿರದ ಸರ್ಕಾರಿ, ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ದಾಖಲಿಸಲಾಗುತ್ತಿದೆ.
ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ, ಕೂಲಿ, ಕೃಷಿ ಆಧಾರಿತ ಕೆಲಸಗಳಿಗಾಗಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು ಯಾವುದೇ ರೀತಿಯ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮೋಟರ್ ವಾಹನ ಕಾಯ್ದೆಯಡಿಯಲ್ಲಿ ದಂಡ ಹಾಕಲಾಗುತ್ತಿದೆ.