ರಾಜ್ಯದಲ್ಲಿ ಸದ್ಯ ಸಂಪುಟ ವಿಸ್ತರಣೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಪ್ರಮುಖ ಖಾತೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಆದ್ರೆ ಈ ಭರವಸೆ ಈಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮುಳ್ಳಾಗುವ ಸಾಧ್ಯತೆಯಿದೆ.
ಯಡಿಯೂರಪ್ಪ ತಮ್ಮ ಆಪ್ತರಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ಕಡೆ ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು. ಇನ್ನೊಂದು ಕಡೆ ಯಡಿಯೂರಪ್ಪ ಆಪ್ತರು. ಮತ್ತೊಂದು ಕಡೆ ರಾಜಕೀಯ ಲೆಕ್ಕಾಚಾರ. ಒಂದೇ ಜಾತಿಗೆ ಹೆಚ್ಚು ಸಚಿವ ಸ್ಥಾನ ನೀಡಿದ್ರೂ ಯಡಿಯೂರಪ್ಪ ಸಂಕಷ್ಟ ಎದುರಿಸಬೇಕು. ನೀಡದೆ ಹೋದ್ರೂ ತಲೆನೋವು.
ಖಾತೆ ಹಂಚಿಕೆ ಕಗ್ಗಂಟಾಗಿರುವ ಯಡಿಯೂರಪ್ಪಗೆ ಸಚಿವರಿಂದಲೂ ಕಿರಿಕಿರಿಯಾಗ್ತಿದೆ. ಕಷ್ಟಪಟ್ಟು ಅಧಿಕಾರಕ್ಕೆ ಬಂದ ಯಡಿಯೂರಪ್ಪನವರಿಗೆ ಅವ್ರ ಆಪ್ತರು, ಈಗ ಸಚಿವರಾಗಿರುವವರನ್ನು ಸಂಭಾಳಿಸುವುದು ಕಷ್ಟವಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮುಖ್ಯ ಸಚಿವ ಸ್ಥಾನ ಬೇಡ. ಈಗಾಗಲೇ ಸಚಿವರಾಗಿರುವವರಿಗೆ ಪ್ರಬಲ ಖಾತೆ ನೀಡಿ ಎಂದು ಹಾಲಿ ಶಾಸಕರು ಹಾಗೂ ಸಚಿವರು ಬೇಡಿಕೆಯಿಟ್ಟಿದ್ದಾರೆ. ಹಾಲಿ ಸಚಿವರಿಗೆ ಪ್ರಬಲ ಖಾತೆ ಮೇಲೆ ಕಣ್ಣಿದೆ ಎನ್ನಲಾಗ್ತಿದೆ.