ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ನಾನು ಹೇಳಲೇ ಇಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ-ಕಹಳೆ ನ್ಯೂಸ್
ಮಂಗಳೂರು: ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ನಾನು ಹೇಳಲೇ ಇಲ್ಲ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ಟರ್ ನಲ್ಲಿ ಸ್ಪಷ್ಟನೆ ನೀಡಿರುವ ಖಾದರ್ , “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ನಾನು ಹೇಳಿಲ್ಲ. CAB ಕರ್ನಾಟಕದಲ್ಲಿ ಜಾರಿ ಮಾಡಿದರೆ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂಬರ್ಥದಲ್ಲಿ ಹೇಳಿದ್ದೇನೆ. ತಪ್ಪಾಗಿ ಅರ್ಥೈಸಿಕೊಂಡು ಕಾಲಹರಣ ಮಾಡುವ ಬದಲು ಇತರ ಕೆಲಸದತ್ತ ಗಮನ ಕೊಡಿ”.
“ಅಂದ ಹಾಗೆ ಹೊಸ ಕಾನೂನು ಹುಟ್ಟು ಹಾಕಿ ಉತ್ತರದ ರಾಜ್ಯಗಳಿಗೆ ಬೆಂಕಿ ಇಟ್ಟಿದ್ದೀರಿ. ಇದರ ನಡುವೆ ಆರ್ಥಿಕತೆ ಕುಸಿತದ ಕಥೆ ಎಲ್ಲಿಗೆ ಬಂತು? ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಾನೂನು ಜಾರಿ ಮಾಡುತ್ತಿದೆ ಕೇಂದ್ರ ಸರಕಾರ” ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಡಿ.17 ರಂದು ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶಾಸಕ ಖಾದರ್, ಕರ್ನಾಟಕದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆ ತಾಳ್ಮೆಯಿಂದ ಇದ್ದಾರೆ. ಕರ್ನಾಟಕದಲ್ಲೂ ಕಾಯ್ದೆ ಅನುಷ್ಠಾನ ಮಾಡ್ತಾರೆ ಎಂಬ ವಿಚಾರ ಕೇಳಿ ಬರುತ್ತಿದೆ. ಒಂದೊಮ್ಮೆ ರಾಜ್ಯದಲ್ಲೂ ಕಾಯ್ದೆ ಜಾರಿಗೆ ಬಂದಲ್ಲಿ ಕರ್ನಾಟಕ ಹೊತ್ತಿ ಉರಿಯಲಿದೆ ಎಂಬ ಹೇಳಿಕೆ ವಿರುದ್ದ ಬಿಜೆಪಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.