Monday, November 25, 2024
ಸುದ್ದಿ

ಬಿಬಿಎಂಪಿ : ಮಂಜುನಾಥ್ ಪ್ರಸಾದ್, ಸರ್ಫರಾಜ್‍ಖಾನ್ ವಿರುದ್ಧ ಎಸಿಬಿ ತನಿಖೆ-ಕಹಳೆ ನ್ಯೂಸ್

ಬೆಂಗಳೂರು, ಡಿ.21- ಘನತ್ಯಾಜ್ಯ ನಿರ್ವಹಣೆಗೆ ಅವೈಜ್ಞಾನಿಕ ಯೋಜನೆ ಅನುಷ್ಠಾನಗೊಳಿಸಿದ್ದೇ ಅಲ್ಲದೆ 246 ಕೋಟಿ ಮೊತ್ತದ ಕಾಮಗಾರಿಗಳನ್ನು ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಗೆ ಗುತ್ತಿಗೆ ನೀಡಿದ ಆರೋಪದ ಮೇಲೆ ಬಿಬಿಎಂಪಿ ಹಿಂದಿನ ಆಯುಕ್ತ ಮಂಜುನಾಥ್ ಪ್ರಸಾದ್, ಜಂಟಿ ಆಯುಕ್ತ ಸರ್ಫರಾಜ್‍ಖಾನ್ ಮತ್ತಿತರರನ್ನು ವಿಚಾರಣೆಗೊಳಪಡಿಸಲು ಎಸಿಬಿ ತೀರ್ಮಾನಿಸಿದೆ.

ಅವೈಜ್ಞಾನಿಕ ಯೋಜನೆ ಜಾರಿಗೊಳಿಸಿ ಆರ್ಥಿಕ ನಷ್ಟ ಉಂಟುಮಾಡಿದ ಜತೆಗೆ ಬೆಂಗಳೂರಿನ ಸ್ವಚ್ಛತೆಯನ್ನು ಹದಗೆಡಿಸಿ 246 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಗೆ ನೀಡಿರುವ ಕುರಿತಂತೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಸಲ್ಲಿಸಿದ್ದ ದೂರಿನ ಮೇರೆಗೆ ಎಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಲು ತೀರ್ಮಾನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದಿನ ಆಯುಕ್ತ ಮಂಜುನಾಥ್ ಪ್ರಸಾದ್, ಜಂಟಿ ಆಯುಕ್ತ ಸರ್ಫರಾಜ್‍ಖಾನ್, ಎಇ ಹೇಮಲತಾ ಹಾಗೂ ಕೆಳಹಂತದ ತಾಂತ್ರಿಕ ವರ್ಗದವರನ್ನು ವಿಚಾರಣೆಗೊಳಪಡಿಸಲು ಎಸಿಬಿ ನಿನ್ನೆ ದಿನಾಂಕ ನಿಗದಿಗೊಳಿಸಿತ್ತು. ಆದರೆ, ಪೌರತ್ವ ಕಾಯ್ದೆ ವಿರೋಧಿಸಿ ಹಲವಾರು ಒಕ್ಕೂಟಗಳು ಪ್ರತಿಭಟನೆ ಹಮ್ಮಿಕೊಂಡಿದ್ದ ಪರಿಣಾಮ 144 ಸೆಕ್ಷನ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದು ಅವ್ಯವಹಾರ: ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಬೋಗಸ್ ಬಿಲ್‍ಗಳನ್ನು ಪಡೆ ಯುತ್ತಿರುವ ಟಿಪಿಎಸ್ ಸಂಸ್ಥೆಯವರಿಗೆ ಅನುಕೂಲವಾಗುವ ಹಾಗೆ ಟೆಂಡರ್ ಆಹ್ವಾನಿಸಲಾಗಿದೆ. ಪಾಲಿಕೆಗೆ ಆರ್ಥಿಕ ನಷ್ಟ ಉಂಟುಮಾಡುತ್ತಿರುವ ಟಿಪಿಎಸ್ ಸಂಸ್ಥೆಗೆ ನೀಡಿರುವ ಕಾರ್ಯಾದೇಶವನ್ನು ರದ್ದುಗೊಳಿಸಬೇಕು ಹಾಗೂ ಸಂಬಂಧಪಟ್ಟ ಎಇ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯ 50 ವಾರ್ಡ್‍ಗಳಲ್ಲಿ ಮಿನಿ ಟ್ರಾನ್ಸ್‍ಫರ್ ಸ್ಟೇಷನ್‍ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗಳಿಗೆ ಟಿಪಿಎಸ್ ಸಂಸ್ಥೆಗೆ ಏಳು ವರ್ಷಗಳಿಗೆ 246 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ. ಇದರಲ್ಲಿ ಹಲವಾರು ಲೋಪದೋಷಗಳಿದ್ದು, ಕಪ್ಪುಪಟ್ಟಿಗೆ ಸೇರಿರುವ ಟಿಪಿಎಸ್ ಸಂಸ್ಥೆಗೆ ನೀಡಿರುವ ಕಾರ್ಯಾದೇಶ ದೋಷಪೂರಿತವಾಗಿದೆ ಎಂದು ರಾಮಲಿಂಗಾರೆಡ್ಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ರೆಡ್ಡಿಯವರ ಈ ದೂರಿನ ಆಧಾರದ ಮೇಲೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಧ್ಯಕ್ಷ ಅಮರೇಶ್ ಅವರು ಎಸಿಬಿಗೆ ದೂರು ನೀಡಿದ್ದರು. ಅಮರೇಶ್ ದೂರಿನ ಮೇರೆಗೆ ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆಸಲು ಎಸಿಬಿ ಮುಂದಾಗಿದೆ.