ಸಿದ್ದರಾಮಯ್ಯ ಮಂಗಳೂರಿಗೆ ಭೇಟಿಗೆ ನಿರ್ಬಂಧ; ನಾಳೆ ಮಧ್ಯರಾತ್ರಿಯವರೆಗೆ ದಕ್ಷಿಣ ಕನ್ನಡಕ್ಕೆ ಬಾರದಂತೆ ನೋಟಿಸ್ ಜಾರಿ-ಕಹಳೆ ನ್ಯೂಸ್
ಬೆಂಗಳೂರು (ಡಿ. 21): ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿನ ದಾಳಿಗೆ ಒಳಗಾಗಿದ್ದ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ತೆರಳುವವರಿದ್ದರು. ಆದರೆ, ಅವರಿಗೆ ನೋಟಿಸ್ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತರು ದಕ್ಷಿಣ ಕನ್ನಡದಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ಡಿ. 22ರ ರಾತ್ರಿ 12ರವರೆಗೆ ಮಂಗಳೂರಿಗೆ ಬಾರದಂತೆ ಪತ್ರ ಬರೆದಿದ್ದಾರೆ.
watchhttps://youtu.be/gJyRAskwgEk
ನಿನ್ನೆ ಮಂಗಳೂರಿಗೆ ತೆರಳಿದ್ದ ಕಾಂಗ್ರೆಸ್ ನಿಯೋಗವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲೇ ತಡೆದು ಪೊಲೀಸ್ ವಶಕ್ಕೆ ಪಡೆದಿದ್ದರಿಂದ ನಿನ್ನೆ ಮಧ್ಯಾಹ್ನದ ಪ್ರಯಾಣವನ್ನು ಸಿದ್ದರಾಮಯ್ಯ ಮೊಟಕುಗೊಳಿಸಿದ್ದರು. ನಿನ್ನೆ ಮಧ್ಯಾಹ್ನ ಮಂಗಳೂರಿಗೆ ತೆರಳಿದ್ದ ಎಂ.ಬಿ. ಪಾಟೀಲ್, ರಮೇಶ್ ಕುಮಾರ್, ವಿ.ಎಸ್. ಉಗ್ರಪ್ಪ ಮುಂತಾದ ನಾಯಕರನ್ನೊಳಗೊಂಡ ಕಾಂಗ್ರೆಸ್ ನಿಯೋಗವನ್ನು ಪೊಲೀಸರ ವಶಕ್ಕೆ ಪಡೆಯಲಾಗಿತ್ತು. ಇಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಮಂಗಳೂರಿನಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿರುವುದರಿಂದ ಶಾಂತಿ ಕಾಪಾಡುವಂತೆ ಸಂದೇಶ ನೀಡಲು ಮಂಗಳುರಿಗೆ ತೆರಳುತ್ತಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಂಗಳೂರಿಗೆ ತೆರಳಬೇಕಿತ್ತು. ಆದರೆ, ಅವರಿಗೆ ಪತ್ರ ಕಳುಹಿಸಿರುವ ಮಂಗಳೂರು ಪೊಲೀಸ್ ಆಯುಕ್ತರು, ಮಂಗಳೂರಿನಲ್ಲಿ ಡಿ. 22ರವರೆಗೂ ಕರ್ಫ್ಯೂ ಜಾರಿಯಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಇದೆ. ಹೀಗಾಗಿ, ಡಿ.22ರ ರಾತ್ರಿ 12ರವರೆಗೂ ತಾವು ಮಂಗಳೂರಿಗೆ ಬರುವಂತಿಲ್ಲ. ತಾವು ಇಲ್ಲಿಗೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆ, ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಂಗಳೂರು ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ರೀತಿಯ ಸಾರಿಗೆ ಸೌಲಭ್ಯ ನಿಷೇಧಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಂಗಳೂರಿನಲ್ಲಿ 2 ದಿನಗಳಿಂದ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕರ್ಫ್ಯೂ ವಿಧಿಸಲಾಗಿತ್ತು. ಮಂಗಳೂರಿನಲ್ಲಿ ಗುರುವಾರ ಇಬ್ಬರು ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ ಆ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಮತ್ತು ವಿರೋಧಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಇಂದು ಮಂಗಳೂರಿಗೆ ಭೇಟಿ ನೀಡಲಿದ್ದ ಸಿದ್ದರಾಮಯ್ಯ ಮಂಗಳೂರು ತಾಲೂಕಿನ ಕುದ್ರೋಳಿ ಮತ್ತು ಕಂದಕದ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವವರಿದ್ದರು. ಆದರೆ, ಪೊಲೀಸ್ ಆಯುಕ್ತರಿಂದ ನೋಟಿಸ್ ಜಾರಿಯಾಗಿರುವುದರಿಂದ ಸಿದ್ದರಾಮಯ್ಯ ಮಂಗಳೂರಿಗೆ ತೆರಳುವಂತಿಲ್ಲ. ಒಂದುವೇಳೆ ಪೊಲೀಸ್ ಆಯುಕ್ತರ ಸೂಚನೆ ಮೀರಿ ಸಿದ್ದರಾಮಯ್ಯ ಮಂಗಳೂರಿಗೆ ತೆರಳಿದರೆ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.