ಹೊಸದಿಲ್ಲಿ, ಡಿ.21: ದರ್ಯಾಗಂಜ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ದಿಲ್ಲಿ ಪೊಲೀಸರು ಕನಿಷ್ಠ 8 ಮಂದಿ ಅಪ್ರಾಪ್ತರು ಸಹಿತ ಒಟ್ಟು 40 ಮಂದಿಯನ್ನು ಬಂಧಿಸಿದ್ದಾರೆ. ವಕೀಲರು ಹಾಗೂ ವೈದ್ಯರು ಸಹಿತ ಭಾರೀ ಸಂಖ್ಯೆಯಲ್ಲಿ ಜನತೆ ಪೊಲೀಸ್ ಠಾಣೆಯ ಎದುರು ಜಮಾಯಿಸಿದ ಬಳಿಕ ಅಪ್ರಾಪ್ತರನ್ನು ಬಿಡುಗಡೆಗೊಳಿಸಲಾಯಿತು ಎಂದು ವರದಿಯಾಗಿದೆ.
ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಕಾರಣ ಪ್ರತಿಭಟನಾನಿರತರನ್ನು ಬಂಧಿಸಲಾಗಿತ್ತು. ಸುಭಾಶ್ ಮಾರ್ಗ್‌ನಲ್ಲಿರುವ ಡಿಸಿಪಿ ಕಚೇರಿಯ ಹೊರಗೆ ಪಾರ್ಕ್ ಮಾಡಲಾಗಿದ್ದ ಕಾರಿಗೆ ಬೆಂಕಿ ಹಚ್ಚಲಾಯಿತು. ಈ ಸಂದರ್ಭದಲ್ಲಿ ಪೊಲೀಸರುಲಾಠಿ ಚಾರ್ಜ್ ನಡೆಸಿದ್ದು, ಜಲಫಿರಂಗಿಯನ್ನು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ದರ್ಯಾಗಂಜ್ ಪೊಲೀಸ್ ಠಾಣೆಯಲ್ಲಿ ಬಂಧಿತರನ್ನು ಇರಿಸಲಾಗಿದ್ದು, ಮೂರು ಗಂಟೆ ಕಾಲ ಯಾರಿಗೂ ಭೇಟಿ ನಿರಾಕರಿಸಲಾಯಿತು. ಮಾಧ್ಯಮ ಪ್ರತಿನಿಧಿಗಳು ಹಾಗೂ ವಕೀಲರು ಬಂಧಿತರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಸ್ಟೇಶನ್ ಸುತ್ತುವರಿದು ಬೇಡಿಕೆ ಇಟ್ಟಿದರು. ಗಾಯಗೊಂಡ ಪ್ರತಿಭಟನಾಕಾರರನ್ನು ಚಿಕಿತ್ಸೆ ನೀಡಲು ಮುಂದಾದ ವೈದ್ಯರ ತಂಡಕ್ಕೂ ಪೊಲೀಸ್ ಸ್ಟೇಶನ್‌ನೊಳಗೆ ಪ್ರವೇಶಿಸಲು ನಿರಾಕರಿಸಲಾಗಿತ್ತು.