Wednesday, January 22, 2025
ಸುದ್ದಿ

ಬ್ರೇಕಿಂಗ್ : ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ, ಮೃತರ ಕುಟುಂಬಕ್ಕೆ ಪರಿಹಾರ : ಸಿಎಂ- ಕಹಳೆ ನ್ಯೂಸ್

ಮಂಗಳೂರು,ಡಿ.21- ಮಂಗಳೂರು ಗೋಲಿಬಾರ್ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಘಟನೆ ಕುರಿತಂತೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಜತೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿಯೂ ಪ್ರಕಟಿಸಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ್ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ ಅವರುಗಳೊಂದಿಗೆ ಮಂಗಳೂರಿಗೆ ಭೇಟಿ ನೀಡಿದ ಯಡಿಯೂರಪ್ಪ ಅವರು, ವಿಮಾನ ನಿಲ್ದಾಣ ಮತ್ತು ಸಕ್ರ್ಯೂಟ್ ಹೌಸ್‍ನಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪ್ರಚೋದನೆಗೊಳಗಾಗದೆ ಸಾರ್ವಜನಿಕರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.

ಗೋಲಿಬಾರನಿಂದ ಮೃತಪಟ್ಟವರ ಕುಟುಂಬ ಸದಸ್ಯರ ಜೊತೆ ಅರ್ಧಗಂಟೆ ಕಾಲ ಚರ್ಚಿಸಿದ್ದೇನೆ. ಸ್ಥಳೀಯ ಪ್ರತಿನಿಧಿಗಳ ಜೊತೆ ಚರ್ಚೆ ಮಾಡಿದ್ದೇನೆ. ಕಫ್ರ್ಯೂನ್ನು ತೆಗೆಯಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಇಂದು ಮಧ್ಯಾಹ್ನ 3ರಿಂದ 6 ಗಂಟೆವರೆಗೆ ಮತ್ತು ನಾಳೆ ಹಗಲು ಪೂರ್ತಿಯಾಗಿ ಕಫ್ರ್ಯೂ ಸಡಿಲಗೊಳಿಸಲಾಗುತ್ತದೆ. ರಾತ್ರಿ ವೇಳೆ ಕಫ್ರ್ಯೂ ಮುಂದುವರೆಯಲಿದೆ. ನಿಷೇಧಾಜ್ಞೆ ಕೂಡ ಜಾರಿಯಲ್ಲಿರಲಿದೆ. ಕ್ರಿಸ್‍ಮಸ್ ಹಬ್ಬದ ವೇಳೆ ಸಭೆ-ಸಮಾರಂಭ ನಡೆಸಲು ನಿಷೇಧಾಜ್ಞೆಯಿಂದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯಾದ್ಯಂತ ಪರಿಸ್ಥಿತಿ ಹತೋಟಿಯಲ್ಲಿದ್ದು, ಸೋಮವಾರದಿಂದ ಕಫ್ರ್ಯೂವನ್ನು ಹಿಂಪಡೆಯಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದರು. ಗೋಲಿಬಾರ್ ಘಟನೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಿದ್ದವಿದೆ. ಯಾವ ಸ್ವರೂಪದ ತನಿಖೆ ಎಂಬುದನ್ನು ಗೃಹಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದರು. ಗೋಲಿಬಾರ್‍ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಕಾನೂನಾತ್ಮಕವಾಗಿ ಪರಿಹಾರ ನೀಡಲು ಪರಿಶೀಲಿಸಿ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಕೇರಳದಿಂದ ಬಂದ ಪತ್ರಕರ್ತರ ತಂಡ ಗುರುತಿನ ಚೀಟಿ ಇಲ್ಲದೆ ಮಂಗಳೂರಿಗೆ ಬಂದು ಕಾನೂನು ಬಾಹಿರ ಕೃತ್ಯಗಳನ್ನು ನಡೆಸಿದ್ದೇಗೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆಯ ಘಟನೆ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆ. ಈಗಾಗಲೇ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರು ಶಾಂತಿ ಪಾಲನೆ ಮಾಡುವ ಭರವಸೆ ನೀಡಿದ್ದಾರೆ. ಇಂದು ಮಂಗಳೂರಿಗೆ ಆಗಮಿಸಿದ್ದರ ಉದ್ದೇಶ ಕೂಡ ಇಲ್ಲಿನ ಸಂಘಟನೆಗಳ ಜೊತೆ ಚರ್ಚೆ ಮಾಡುವುದಾಗಿತ್ತು. ಅದರಂತೆ ಚರ್ಚೆ ನಡೆಸಿದ್ದೇನೆ. ಎಲ್ಲರೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

ವಿಮಾನ ನಿಲ್ದಾಣದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಪ್ರತಿಭಟನೆ ನಡೆದಿದ್ದು ಹೇಗೆ ? ಜನರು ಗುಂಪುಗೂಡಲು ಯಾವುದಾದರೂ ಪ್ರಚೋದನೆ ಇತ್ತೇ? ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಹೇಗೆ ? ಗೋಲಿಬಾರ್‍ಗೆ ಕಾರಣಗಳೇನು ಎಂಬೆಲ್ಲ ಮಾಹಿತಿಗಳನ್ನು ಯಡಿಯೂರಪ್ಪ ಪಡೆದುಕೊಂಡಿದ್ದಾರೆ. ನಂತರ ಸಕ್ರ್ಯೂಟ್ ಹೌಸ್‍ನಲ್ಲಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿದರು. ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಯು.ಟಿ.ಖಾದರ್, ಐವಾನ್ ಡಿಸೋಜ, ಮೊಯಿದ್ದೀನ್ ಭಾವಾ ಸೇರಿದಂತೆ ಅನೇಕ ನಾಯಕರು ಯಡಿಯೂರಪ್ಪ ಅವರ ಜೊತೆ ಸಮಾಲೋಚನೆ ನಡೆಸಿದರು.

ಇದೇ ವೇಳೆ ಗೋಲಿಬಾರ್‍ನಿಂದ ಸಾವನ್ನಪ್ಪಿದ ನೌಶೀನ್ ಕುದ್ರೋಳಿ, ಅಬ್ದುಲ್ ಜೆನಿನ್ ಅವರ ಕುಟುಂಬದ ಸದಸ್ಯರು ಸಕ್ರ್ಯೂಟ್ ಹೌಸ್‍ಗೆ ಬಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಗೋಲಿಬಾರ್‍ನಿಂದ ತಮ್ಮ ಕುಟುಂಬದ ಸದಸ್ಯರ ಹತ್ಯೆಯಾಗಿದೆ ಎಂದು ಅಳಲು ತೋಡಿಕೊಂಡರು. ಅವರಿಗೆ ಯಡಿಯೂರಪ್ಪ ಸಾಂತ್ವನ ಹೇಳಿದರು. ನಂತರ ಯಡಿಯೂರಪ್ಪ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.