Sunday, November 24, 2024
ಸುದ್ದಿ

ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆರೋಪ: ಹಲವರ ಆಸ್ತಿಗಳಿಗೆ ಬೀಗ ಜಡಿಯುತ್ತಿರುವ ಅಧಿಕಾರಿಗಳು-ಕಹಳೆ ನ್ಯೂಸ್

ಲಕ್ನೋ, ಡಿ.22: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗುವ ನಷ್ಟವನ್ನು ಅದಕ್ಕೆ ಕಾರಣರಾದವರಿಂದ ದಂಡದ ರೂಪದಲ್ಲಿ ಸಂಗ್ರಹಿಸಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಆರೋಪಿಗಳ ಆಸ್ತಿಗಳನ್ನು ಗುರುತಿಸುವ ಹಾಗೂ ಬೀಗ ಜಡಿಯುವ ಕಾರ್ಯ ಆರಂಭಿಸಿದ್ದಾರೆ.

ಈ ಮಧ್ಯೆ ರಾಂಪುರ ಹಿಂಸಾಚಾರದಲ್ಲಿ ಮತ್ತೊಬ್ಬ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಕಾನ್ಪುರ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇನ್ನೊಬ್ಬ ವ್ಯಕ್ತಿ ಶನಿವಾರ ತಡರಾತ್ರಿ ಕೊನೆಯುಸಿರೆಳೆಯುವ ಮೂಲಕ ಗುರುವಾರದಿಂದೀಚೆಗೆ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 18ಕ್ಕೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ ತೀರ್ಪಿನ ಆಧಾರದಲ್ಲಿ ಮುಝಾಫರ್‌ ನಗರ ಜಿಲ್ಲಾಡಳಿತವು ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಆರೋಪದಲ್ಲಿ 50ಕ್ಕೂ ಹೆಚ್ಚು ಮಂದಿಗೆ ಸೇರಿದ ಮಳಿಗೆಗಳಿಗೆ ಬೀಗ ಜಡಿದಿದೆ. ಬೀಗ ಜಡಿದ ಎಲ್ಲ ಮಳಿಗೆಗಳು ಗಲಭೆಪೀಡಿತ ಮೀನಾಕ್ಷಿ ಚೌಕ್ ಮತ್ತು ಕಚ್ಚಿ ಸಾದಕ್ ಪ್ರದೇಶದಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆ ಮತ್ತು ಈ ಪ್ರಮಾಣದಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎನ್ನಲಾದವರನ್ನು ಶಿಕ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಮಧ್ಯೆ ಫಿರೋಝಾಬಾದ್ ಪೊಲೀಸ್ ಮುಖ್ಯಸ್ಥ ಸಚೀಂದ್ರ ಪಾಟೀಲ್ ಹೇಳಿಕೆ ನೀಡಿ ದೊಂಬಿಗೆ ಕಾರಣರಾದವರ ವಿರುದ್ಧ ಎನ್‌ಎಸ್‌ಎ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಜತೆ ಪ್ರತಿಭಟನಾಕಾರರು ಸಂಘರ್ಷಕ್ಕೆ ಇಳಿದ ಲಕ್ನೋದಲ್ಲಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿಯನ್ನು ಅಂದಾಜಿಸಲು ನಾಲ್ಕು ಮಂದಿಯ ಸಮಿತಿ ರಚಿಸಲಾಗಿದೆ. ಆಸಿಪಾಸ್ತಿ ಹಾನಿಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರವಿಜಯ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ವಿಶ್ಲೇಷಿಸಿ, ಯಾರು ಇಂಥ ಕೃತ್ಯದಲ್ಲಿ ತೊಡಗಿದ್ದರು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಮುಖ್ಯಸ್ಥರು ಕೂಡಾ, ಈ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.