ಬೆಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ನೂತನ ಶಾಸಕರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ 12, ಕಾಂಗ್ರೆಸ್‌ನ 2 ಹಾಗೂ ಒಬ್ಬರು ಪಕ್ಷೇತರ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಕೆ.ಆರ್.ಪುರಂನ ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್‌ನ ಗೋಪಾಲಯ್ಯ, ಕೆ.ಆರ್.ಪೇಟೆಯ ನಾರಾಯಣಗೌಡ, ಚಿಕ್ಕಬಳ್ಳಾಪುರದ ಸುಧಾಕರ್, ಹಿರೆಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್, ಕಾಗವಾಡ ಕ್ಷೇತ್ರದ ಶ್ರೀಮಂತ್ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ರಾಣೆಬೆನ್ನೂರು ಕ್ಷೇತ್ರದ ಅರುಣ್ ಕುಮಾರ್, ಅಥಣಿಯ ಮಹೇಶ್ ಕುಮಠಳ್ಳಿ, ಹೊಸಕೋಟೆಯ ಶರತ್ ಬಚ್ಚೇಗೌಡ, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ವಿಜಯನಗರದ ಆನಂದ್ ಸಿಂಗ್, ಗೋಕಾಕ ಕ್ಷೇತ್ರದ ರಮೇಶ್ ಜಾರಕಿಹೊಳಿ, ಹುಣಸೂರಿನ ಮಂಜುನಾಥ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸಭಾಧ್ಯಕ್ಷ ಕಾಗೇರಿ ಸಂವಿಧಾನ ಕುರಿತು ಪುಸ್ತಕ ಮತ್ತು ಹೂಗುಚ್ಛ ನೀಡಿ ಅಭಿನಂದಿಸಿದರು.
ಇನ್ನು ರಾಣೆಬೆನ್ನೂರಿನ ಅರುಣ ಪೂಜಾರ ಹಾಗೂ ಹೊಸಕೋಟೆಯ ಶರತ್ ಬಚ್ಚೇಗೌಡ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು. ಶಿವಾಜಿನಗರದ ರಿಜ್ವಾನ್ ಅರ್ಷದ್ ಅವರು ಸದ್ಯ ವಿಧಾನಪರಿಷತ್ತಿನ ಸದಸ್ಯರಾಗಿದ್ದು, ವಿಧಾನಸಭೆಯನ್ನು ಮೊದಲ ಬಾರಿ ಪ್ರವೇಶಿಸುತ್ತಿದ್ದಾರೆ. ಹುಣಸೂರಿನ ಎಚ್.ಪಿ. ಮಂಜುನಾಥ್ ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದು, 2018ರಲ್ಲಿ ಸೋಲುಕಂಡಿದ್ದಾರೆ.