ನವದೆಹಲಿ: ಭಾರತ ಸರಕಾರ ಕೂಡಲೇ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಸಿಆರ್) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಒತ್ತಾಯಿಸಿದೆ.
ಈಶಾನ್ಯ ರಾಜ್ಯಗಳು ಮಾತ್ರವಲ್ಲ ಇನ್ನೂ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದನ್ನು ವಿರೋಧಿಸಿದ್ದಾರೆ. ಇನ್ನೂ ಹಲವರು ಇದೇ ದಾರಿ ಅನುಸರಿಸುವ ಸಾಧ್ಯತೆಗಳಿವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರಕಾರದ ಹಠಮಾರಿತನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಹೇಳಿಕೆಯಲ್ಲಿ ತಿಳಿಸಿದೆ.
ಎನ್‌ಆರ್‌ಸಿ, ಸಿಎಎ ಸಂವಿಧಾನ-ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮತ್ತು ಅದಕ್ಕೆ ಸಂಬಂಧಿಸಿರುವ ಎನ್ ಆರ್ ಸಿ/ಎನ್ ಪಿ ಆರ್ ವಿರುದ್ಧ ಪ್ರತಿಭಟನೆಗಳನ್ನು ಶಾಂತಿಯುತವಾಗಿ ಮುಂದುವರೆಸಬೇಕು ಎಂದು ಪಾಲಿಟ್ ಬ್ಯುರೊ ಜನತೆಗೆ ಮನವಿ ಮಾಡಿಕೊಂಡಿದೆ.
ಹಲವೆಡೆಗಳಲ್ಲಿ ಪ್ರತಿಭಟನೆಗಳ ನಿಷೇಧ ಮತ್ತು ಶಾಂತಿಯುತ ಪ್ರತಿಭಟನಕಾರರ ಮೇಲೆ ವಿಪರೀತ ಬಲ ಪ್ರಯೋಗವನ್ನು ಪಾಲಿಟ್ ಬ್ಯುರೊ ಖಂಡಿಸಿದೆ. ಹಿಂಸಾಚಾರವನ್ನು ಉದ್ರೇಕಿಸುವ ಉದ್ದೇಶ ಹೊಂದಿರುವ ಯಾವುದೇ ತಂತ್ರಗಳಿಗೆ ಜನ ಬಲಿಬೀಳಬಾರದು ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಜನತೆಗೆ ಮನವಿ ಮಾಡಿಕೊಂಡಿದೆ.