Monday, January 20, 2025
ರಾಜಕೀಯ

ಡಿಕೆಶಿಗೆ ಕೆಪಿಸಿಸಿ ಪಟ್ಟಾಭಿಷೇಕ, ಕಾಂಗ್ರೆಸ್ ನಲ್ಲಿ ಹೊಸ ‘ಸಂಕ್ರಾಂತಿ-ಕಹಳೆ ನ್ಯೂಸ್

ಬೆಂಗಳೂರು, ಡಿ .22-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಂಕ್ರಾಂತಿ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದ್ದು, ಹಾಲಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೇಪಥ್ಯಕ್ಕೆ ಸರಿದಿದ್ದಾರೆ.ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ದಿನೇಶ್‍ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೌಜನ್ಯಕ್ಕಾದರೂ ಕಾಂಗ್ರೆಸ್‍ನ ಯಾವ ಮುಖಂಡರೂ ರಾಜೀನಾಮೆ ಹಿಂಪಡೆಯಿರಿ, ಅಧ್ಯಕ್ಷ ಸ್ಥಾನ ಮುಂದುವರೆಯಿರಿ ಮನವಿ ಮಾಡಲಿಲ್ಲ. ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದೇ ಸರಿ ಎಂದು ಬಹುತೇಕ ನಾಯಕರು ಮಾತನಾಡಿದ್ದಾರೆ.

ಇದು ದಿನೇಶ್‍ಗುಂಡೂರಾವ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮದುವೆ ವಾರ್ಷಿಕೋತ್ಸವದ ನೆಪದಲ್ಲಿ ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಿದ ದಿನೇಶ್‍ಗುಂಡೂರಾವ್ ಮತ್ತೆ ಕೆಪಿಸಿಸಿಯತ್ತ ತಲೆ ಹಾಕಿಲ್ಲ.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಜ್ವಾಲಾಮುಖಿಯಂತಹ ಪ್ರತಿಭಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಕೂಡ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದೆ. ಆದರೆ ಕರ್ನಾಟಕದಲ್ಲಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್ ಬಹಿರಂಗವಾಗಿ ಕಾಣಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಉಳಿದುಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೀನಾಮೆ ಅಂಗೀಕಾರಗೊಳ್ಳುವ ಅಥವಾ ತಿರಸ್ಕಾರಗೊಳ್ಳುವ ನಿರ್ಧಾರ ಪ್ರಕಟವಾಗುವವರೆಗಾದರೂ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದರು. ಅದನ್ನು ದಿನೇಶ್‍ಗುಂಡೂರಾವ್ ಪಾಲಿಸಿಲ್ಲ. ಹೀಗಾಗಿ ಪರ್ಯಾಯ ನಾಯಕರ ಆಯ್ಕೆಗಾಗಿ ಹೈಕಮಾಂಡ್ ವೀಕ್ಷಕರನ್ನು ಕಳುಹಿಸಿತ್ತು.ಮಧುಸೂದನ್ ಮಿಸ್ತ್ರಿ ಮತ್ತು ಭಕ್ತಚರಣ ದಾಸ್ ಅವರನ್ನೊಳಗೊಂಡ ವೀಕ್ಷಕರ ತಂಡ ಬೆಂಗಳೂರಿಗೆ ಆಗಮಿಸಿ ವಿಪಕ್ಷ ನಾಯಕ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಪಕ್ಷ ನಾಯಕನ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂದು ಕೆಲವು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ. ಆದರೆ ದಿನೇಶ್‍ಗುಂಡೂರಾವ್ ಪರವಾಗಿ ಯಾರೂ ವಕಾಲತ್ತು ವಹಿಸಿಲ್ಲ.ಒಂದು ಹಂತದಲ್ಲಿ ತಮಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂದು ದಿನೇಶ್‍ಗುಂಡೂರಾವ್ ನಂಬಿದ್ದ ಸಿದ್ದರಾಮಯ್ಯ ಕೂಡ ಡಿ.ಕೆ.ಶಿವಕುಮಾರ್ ಪರವಾಗಿ ವೀಕ್ಷಕರ ಮುಂದೆ ಅಭಿಪ್ರಾಯ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೆ ಪ್ರಭಾವಿ ಹಾಗೂ ವರ್ಚಸ್ವಿ ನಾಯಕರ ಅಗತ್ಯವಿದೆ. ಇನ್ನು ಮುಂದಿನ ಮೂರೂವರೆ ವರ್ಷಗಳ ಕಾಲ ಪಕ್ಷವನ್ನು ಚಟುವಟಿಕೆಯಲ್ಲಿಡಬೇಕು. ಅಗತ್ಯ ಸಂಪನ್ಮೂಲ ಕ್ರೋಢೀಕರಿಸಿ ಚುನಾವಣೆಗಳನ್ನು ಎದುರಿಸಬೇಕು. ಹೀಗಾಗಿ ಪಕ್ಷಕ್ಕೆ ಸಮುದಾಯದ ಬೆಂಬಲವಿರುವ ಸಾಮಥ್ರ್ಯನಾಯಕರ ಅಗತ್ಯವಿದೆ. ಎಲ್ಲಾ ದೃಷ್ಟಿಕೋನದಿಂದಲೂ ಡಿ.ಕೆ.ಶಿವಕುಮಾರ್ ಸೂಕ್ತ ಆಯ್ಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ.ಹೀಗಾಗಿ ಮಧುಸೂದನ್ ಮಿಸ್ತ್ರಿ ನೇತೃತ್ವದ ವೀಕ್ಷಕರ ತಂಡ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಪರವಾಗಿ ವರದಿ ನೀಡಿದ್ದು, ಸಂಕ್ರಾಂತಿ ವೇಳೆಗೆ ನೇಮಕಾತಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ದಿನೇಶ್‍ಗುಂಡೂರಾವ್ ಕಾಂಗ್ರೆಸ್‍ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಉನ್ನತ ಸ್ಥಾನಗಳನ್ನು ಪಡೆದ ದಾಖಲೆ ಮಾಡಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದರು. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ದಿನೇಶ್‍ಗುಂಡೂರಾವ್ ಅವರನ್ನು ಕೈಬಿಟ್ಟಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಯಿತು.

ಪರಮೇಶ್ವರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾದಾಗ ದಿನೇಶ್ ಗುಂಡೂರಾವ್ ಅವರನ್ನೇ ಹೈಕಮಾಂಡ್ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಈ ರೀತಿ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಸ್ಥಾನಮಾನ ಪಡೆದ ದಿನೇಶ್‍ಗುಂಡೂರಾವ್ ಅವರು ಪಕ್ಷದ ನಿಷ್ಠಾವಂತರು ಎಂಬುದರಲ್ಲಿ ಎರಡು ಮಾತಿಲ್ಲ.

ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಒಂದು ಹಂತದಲ್ಲಿ ಸಿದ್ದರಾಮಯ್ಯ ಬಣದ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು ಎಂಬ ಅಸಮಾಧಾನ ಹಿರಿಯ ಕಾಂಗ್ರೆಸ್ಸಿಗರಲ್ಲಿತ್ತು. ಉನ್ನತ ಸ್ಥಾನಮಾನಗಳ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ಸಿಗರ ನಡುವೆ ಸದಾಕಾಲ ಶೀತಲ ಸಮರ ನಡೆಯುತ್ತಲೇ ಇದೆ.

ವಿಪಕ್ಷ ನಾಯಕ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಒಂದೇ ಬಣದಲ್ಲಿವೆ. ವಿಪಕ್ಷ ನಾಯಕನನ್ನಾದರೂ ಬದಲಾವಣೆ ಮಾಡಿ, ಇಲ್ಲವೇ ಕೆಪಿಸಿಸಿ ಅಧ್ಯಕ್ಷರನ್ನಾದರೂ ಬದಲಾವಣೆ ಮಾಡಿ ಎಂದು ಹೈಕಮಾಂಡ್ ಬೆನ್ನು ಬಿದ್ದಿದ್ದರು. ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಹಿಂದೇಟು ಹಾಕಿದ ಕಾಂಗ್ರೆಸ್ ವರಿಷ್ಠರು ದಿನೇಶ್‍ಗುಂಡೂರಾವ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ನಿಯೋಜನೆ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.