Thursday, November 28, 2024
ಸುದ್ದಿ

ಮುಸ್ಲಿಮರಿಗೆ ಪ್ರಧಾನಿ ನರೇಂದ್ರ ಮೋದಿ ಅಭಯ-ಕಹಳೆ ನ್ಯೂಸ್

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬಗ್ಗೆ ದೇಶದ ಮುಸ್ಲಿಮರಲ್ಲಿ ಮೂಡಿರುವ ಭಯವನ್ನು ದೂರ ಮಾಡುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಾಡಿದರು.

‘ಪೌರತ್ವ ಕಾಯ್ದೆಯಿಂದಾಗಲಿ, ಎನ್‌ಆರ್‌ಸಿಯಿಂದಾಗಲಿ ದೇಶದ ನಾಗರಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದು ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸಿದ ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳನ್ನು ನೀಡುವ ಕಾಯ್ದೆ. ಯಾರ ಹಕ್ಕನ್ನೂ ಇದು ಕಸಿದುಕೊಳ್ಳುವುದಿಲ್ಲ. ಆದ್ದರಿಂದ ಈ ನೆಲದ ಮಕ್ಕಳಾಗಿರುವ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ’ ಎಂದು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಈ ಕಾಯ್ದೆಯನ್ನು ನಿಮಿತ್ತವಾಗಿಟ್ಟುಕೊಂಡು ಕೆಲವರು ನನ್ನ ವಿರುದ್ಧ ಹೋರಾಟಕ್ಕೆ ಜನರನ್ನು ಪ್ರಚೋದಿಸುತ್ತಿದ್ದಾರೆ. ಎನ್‌ಆರ್‌ಸಿ ಜಾರಿಯಾದರೆ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂಬ ಭಯವನ್ನು ವಿರೋಧಪಕ್ಷಗಳು ಹಾಗೂ ನಗರ ನಕ್ಸಲರು ಬಿತ್ತುತ್ತಿದ್ದಾರೆ. ಎಲ್ಲಿವೆ ಬಂಧನ ಕೇಂದ್ರಗಳು? ಅವೆಲ್ಲವೂ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಶುದ್ಧ ಸುಳ್ಳುಗಳು’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿರೋಧಪಕ್ಷಗಳ ಮೇಲೆ ಟೀಕಾ ಪ್ರಹಾರ ಮಾಡಿದ ಅವರ, ಪೌರತ್ವ ಕಾಯ್ದೆಯ ಬಗ್ಗೆ ವದಂತಿ ಹಬ್ಬಿಸುವ ಮೂಲಕ ವಿರೋಧಪಕ್ಷಗಳು ವೋಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಿವೆ. ಈ ಕಾಯ್ದೆಯಲ್ಲಿ ಭೇದಭಾವ ಮಾಡುವಂಥ ಯಾವುದೇ ಅಂಶವಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

‘ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಿರಾಶ್ರಿತರಿಗೆ ಪೌರತ್ವ ನೀಡುವ ಬಗ್ಗೆ ಕಾಂಗ್ರೆಸ್‌ನ ಮನಮೋಹನ ಸಿಂಗ್‌ ಹಾಗೂ ಅಶೋಕ್‌ ಗೆಹ್ಲೊಟ್‌ ಅವರು ಹಿಂದೆ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿದ ಮೋದಿ, ‘ವಿರೋಧ ಪಕ್ಷಗಳು ನೀಡಿದ್ದ ಭರವಸೆಗಳನ್ನು ನಾವು ಈಡೇರಿಸುತ್ತಿದ್ದೇವೆ. ವೋಟ್‌ ಬ್ಯಾಂಕ್‌ ರಾಜಕೀಯವನ್ನೇ ನಂಬಿದ್ದ ಅವರಿಗೆ ತಾವು ನೀಡಿದ್ದ ಭರವಸೆಗಳನ್ನೇ ಈಡೇರಿಸುವ ಧೈರ್ಯ ಇರಲಿಲ್ಲ’ ಎಂದರು.

‘ಪಾಕಿಸ್ತಾನವು ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ದೌರ್ಜನ್ಯದತ್ತ ವಿಶ್ವದ ಗಮನವನ್ನು ಸೆಳೆಯಲು ಭಾರತಕ್ಕೆ ಅವಕಾಶ ಇತ್ತು. ಆದರೆ, ವಿರೋಧ ಪಕ್ಷಗಳ ರಾಜಕೀಯ ಉದ್ದೇಶದ ಪ್ರತಿಭಟನೆಯಿಂದ ಆ ಅವಕಾಶ ಕಳೆದುಹೋಯಿತು’ ಎಂದು ಹೇಳಿದರು.

ಸುಮಾರು ಒಂದೂಮುಕ್ಕಾಲು ಗಂಟೆಯ ಸುದೀರ್ಘ ಭಾಷಣದ ಬಹುಭಾಗವನ್ನು ಮುಸ್ಲಿಮರಲ್ಲಿ ಮೂಡಿರುವ ಭಯವನ್ನು ದೂರಮಾಡುವುದಕ್ಕೇ ವ್ಯಯಿಸಿದ ಮೋದಿ, ‘ಈ ಸಮುದಾಯದವರು ಹಿಂದಿನ ನನ್ನ ಸಾಧನೆಗಳತ್ತ ಗಮನಹರಿಸಬೇಕೇ ವಿನಾ ವಿರೋಧಿಗಳ ಟೀಕೆ- ಆರೋಪಗಳತ್ತ ಅಲ್ಲ. ವಿರೋಧಪಕ್ಷಗಳಿಗೆ ನಾನು ಅಡ್ಡಿಯಾಗಿದ್ದೇನೆ. ನನ್ನನ್ನು ದೂರ ಸರಿಸಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 20 ವರ್ಷಗಳಿಂದ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಆದರೆ ಅವರಿಗೆ ಅದರಲ್ಲಿ ಯಶಸ್ಸು ಲಭಿಸಿಲ್ಲ’ ಎಂದರು.