ಬೆಂಗಳೂರು: ಪೌರತ್ವ ಕಾಯ್ದೆಪರವಾಗಿ ನಿನ್ನೆ ಟೌನ್ ಹಾಲ್ ನಲ್ಲಿ ಬೃಹತ್ ರ್ಯಾಲಿ ನಡೆದ ಬೆನ್ನಲ್ಲೇ ಇಂದು ಮತ್ತೆ ಮುಸ್ಲಿಂ ಸಂಘಟನೆಗಳು ಪೌರತ್ವ ಕಾಯ್ದೆ ವಿರೋಧಿಸಿ ಬೃಹತ್ ರ್ಯಾಲಿ ಹಮ್ಮಿಕೊಂಡಿವೆ.
ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದ್ದು, ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಮುಸ್ಲಿಂ ಸಂಘಟನೆಗಳು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿವೆ. ಮೂಲಗಳ ಪ್ರಕಾರ 35 ಮುಸ್ಲಿಂ ಸಂಘಟನೆಗಳು ಇಂದು ಬೃಹತ್ ರ‍್ಯಾಲಿಯನ್ನು ಆಯೋಜಿಸಿದ್ದು, ಪೊಲೀಸ್ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖುದ್ದೂಸ್‍ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‍ನಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುವುದು ನಿಶ್ಚಿತ. ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದೆ.
ಹೀಗಾಗಿ ಬೆಂಗಳೂರಿನಾದ್ಯಂತ ಇಂದು ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಸಿಲಿಕಾನ್ ಸಿಟಿಯ ನಾಲ್ಕೂ ದಿಕ್ಕಗಳಿಂದಲೂ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ಗೀತಾ ಜಂಕ್ಷನ್ – ಸೌತ್‍ಎಂಡ್ ಸರ್ಕಲ್ – ಮಿನರ್ವ ಸರ್ಕಲ್- ಟೌನ್‍ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮೂಲಕ ಬೈಕ್ ರ‍್ಯಾಲಿ ನಡೆಯಲಿದೆ. ಇದಲ್ಲದೆ ಇತ್ತ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್ ಮೂಲಕ ಮೆರವಣಿಗೆ ಸಾಗಲಿದೆ. ಹಾಗಾಗಿ, ಈ ಭಾಗದಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ಕಾಡಲಿದೆ.
ಅಂತೆಯೇ ಲಗ್ಗೆರೆ-ರಾಜಾಜಿನಗರ- ನವರಂಗ- ರೇಸ್‍ಕೋರ್ಸ್-ಮೇಖ್ರಿ ವೃತ್ತ- ಜಯಮಹಲ್ ಮತ್ತೊಂದು ಮೆರವಣಿಗೆ ಬರಲಿದೆ. ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್ ಏರ್ ಪೋರ್ಟ್ ರಸ್ತೆ, ಹಲಸೂರು ಮಾರ್ಗ, ಹಿಸೂರು, ಬನ್ನೇರುಘಟ್ಟ ಮೂಲಕವೂ ರ‍್ಯಾಲಿ ನಡೆಯಲಿದೆ.