ಬಿಜೆಪಿ ನನ್ನನ್ನು ಕಣೆಗಣಿಸಿದರೆ ಬೇರೆ ಹಾದಿ ತುಳಿಯಬೇಕಾಗುತ್ತದೆ : ಶಾಸಕ ಗೂಳಿಹಟ್ಟಿಶೇಖರ್ ಎಚ್ಚರಿಕೆ-ಕಹಳೆ ನ್ಯೂಸ್
ಹೊಸದುರ್ಗ : ಬಿಜೆಪಿ ಪಕ್ಷ ನನ್ನನ್ನು ಕಡೆಗಣಿಸಿದರೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಶಾಸಕ ಗೂಳಿಹಟ್ಟಿಶೇಖರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ್ಲಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 17 ಜನ ಶಾಸಕರನ್ನು ಪಕ್ಷದಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗಿದೆ. ಅವರಿಗೆ ಏನೆಲ್ಲಾ ಅನುಕೂಲ ಮಾಡಿದ್ದಾರೆ ಎನ್ನುವುದು ಜನ ನೋಡಿದ್ದಾರೆ. ಆದರೆ, 2008 ರಲ್ಲಿ ನಾನು ಬೆಂಬಲಕೊಟ್ಟಾಗ ನನ್ನನ್ನು ಕೇವಲ ಸಚಿವರನ್ನಾಗಿ ಮಾಡಿ, ಯಾವುದೇ ಅನುದಾನ ನೀಡಲಿಲ್ಲ ಎಂದರು.
ಉದ್ದೇಶ ಪೂರ್ವಕವಾಗಿ ನನ್ನ ಹಾಗೂ ನಮ್ಮ ಕಾರ್ಯಕರ್ತರನ್ನು ಪಕ್ಚದ ಚಟುವಟಿಕೆಗಳಲ್ಲಿ ದೂರ ಇಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೇರೆಯದೇ ಹಾದಿ ತುಳಿಯಬೇಕಾಗುತ್ತದೆ. ಮುಂದಿನ ತೀರ್ಮಾನಗಳಿಗೆ ಪಕ್ಷವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.