Friday, November 29, 2024
ಸುದ್ದಿ

ವಿಮಾ ಕಂಪನಿಗಳು ರೈತರಿಗೆ ಉಳಿಸಿಕೊಂಡಿರುವ ಬಾಕಿ ಎಷ್ಟು ಗೊತ್ತೇ?-ಕಹಳೆ ನ್ಯೂಸ್

ಹೊಸದಿಲ್ಲಿ, ಡಿ.23: ರೈತರಿಗೆ ಬೆಳೆ ವಿಮೆ ಮೊತ್ತ ಸುಲಲಿತವಾಗಿ ಹಾಗೂ ತ್ವರಿತವಾಗಿ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಫಸಲು ವಿಮಾ ಯೋಜನೆಯ ಮೂಲ ಉದ್ದೇಶವೇ ವಿಫಲವಾಗಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. 2019ರ ಡಿಸೆಂಬರ್ 15ರ ವರೆಗೆ ವಿಮಾ ಕಂಪನಿಗಳು ರೈತರಿಗೆ ಪಾವತಿಸಬೇಕಾಗಿರುವ ಪರಿಹಾರ ಮೊತ್ತ ಮೂರು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.

ಕಳೆದ ಅಕ್ಟೋಬರ್ 31ಕ್ಕೆ ಹಿಂಗಾರು ಹಂಗಾಮಿನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ 2,511 ಕೋಟಿ ರೂಪಾಯಿ ಆಗಿತ್ತು. ಇದು ರೈತರು ಸಲ್ಲಿಸಿರುವ ಒಟ್ಟು ಕ್ಲೇಮ್‌ನ ಶೇಕಡ 16ರಷ್ಟು.

ಜಾಹೀರಾತು
ಜಾಹೀರಾತು
ಜಾಹೀರಾತು

ರೈತರಿಗೆ ಪಾವತಿಸಬೇಕಾಗಿರುವ ಮೊತ್ತವನ್ನು ತಕ್ಷಣ ಪಾವತಿಸುವಂತೆ ಮಾಡುವ ಉದ್ದೇಶದಿಂದ ಕೃಷಿ ಸಚಿವಾಲಯ ವಿಳಂಬ ಪಾವತಿಗಾಗಿ ವಿಮಾ ಕಂಪನಿಗಳ ಮೇಲೆ ದಂಡಶುಲ್ಕ ವಿಧಿಸುತ್ತಿದೆ. ಆದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. 2018ರ ಅಕ್ಟೋಬರ್‌ನಲ್ಲಿ ಪರಿಷ್ಕರಿಸಲಾದ ಪಿಎಂಎಫ್‌ಬಿವೈ ಮಾರ್ಗಸೂಚಿ ಪ್ರಕಾರ ರೈತರು ಸೂಕ್ತ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿದ 30 ದಿನಗಳ ಒಳಗಾಗಿ ವಿಮಾ ಕಂಪನಿಗಳು ಪರಿಹಾರ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ ಶೇಕಡ 12ರ ದರದಲ್ಲಿ ದಂಡ ವಿಧಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಜನೆ ಆರಂಭವಾದಾಗಿನಿಂದ ಇದುವರೆಗೆ ವಿಮಾ ಕಂಪನಿಗಳಿಗೆ 16 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಕೃಷಿ ಸಚಿವಾಲಯದ ಮೂಲಗಳು ಹೇಳುತ್ತವೆ.

ಬೆಳೆ ವಿಮೆ ಪಾವತಿ ವಿಳಂಬವಾಗುವುದರಿಂದ ರೈತರು ಮುಂದಿನ ಋತುವಿನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲು ಹಣದ ಮುಗ್ಗಟ್ಟು ಎದುರಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ತಾವು ಪಡೆದ ಕೃಷಿ ಸಾಲವನ್ನು ಸಕಾಲಕ್ಕೆ ಪಾವತಿಸಲು ಸಾಧ್ಯವಾಗದೇ ಸುಸ್ತಿದಾರರಾಗುತ್ತಿದ್ದಾರೆ.

ವಿಮಾ ಪರಿಹಾರ ವಿಳಂಬವಾಗಲು ಪ್ರಮುಖ ಕಾರಣವೆಂದರೆ ವಿಮಾ ಕಂತು ಸಬ್ಸಿಡಿ ಮೊತ್ತವನ್ನು ರಾಜ್ಯ ಸರ್ಕಾರಗಳು ವಿಮಾ ಕಂಪನಿಗಳಿಗೆ ಸಕಾಲಕ್ಕೆ ಬಿಡುಗಡೆ ಮಾಡದಿರುವುದು ಎನ್ನುವುದು ಕೃಷಿ ಸಚಿವಾಲಯದ ಉನ್ನತ ಅಧಿಕಾರಿಗಳ ಅಭಿಪ್ರಾಯ. ಮಾರ್ಗಸೂಚಿಯ ಪ್ರಕಾರ, ರಾಜ್ಯ ಸರ್ಕಾರಗಳು ಸಬ್ಸಿಡಿ ಬಿಡುಗಡೆ ಮಾಡಿದ ಬಳಿಕವಷ್ಟೇ ಕೇಂದ್ರ ಸರ್ಕಾರ ತನ್ನ ಪಾಲನ್ನು ಬಿಡುಗಡೆ ಮಾಡಲು ಅವಕಾಶವಿದೆ. ಯೋಜನೆಯಡಿ ವಿಮಾ ಕಂತಿನ ಶೇಕಡ 1.5- 2 ರಷ್ಟು ಮೊತ್ತವನ್ನು ರೈತರು ಪಾವತಿಸಬೇಕಿದ್ದು, ಉಳಿದ ಕಂತನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಾನವಾಗಿ ಭರಿಸುತ್ತವೆ.