Monday, January 20, 2025
ರಾಜಕೀಯ

ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರಿಗೆ 1 ರೂ ಕೂಡ ಪರಿಹಾರ ಕೊಡಲ್ಲ; ಬಿಎಸ್​ವೈ ಸ್ಪಷ್ಟನೆ – ಕಹಳೆ ನ್ಯೂಸ್

ಮಂಗಳೂರು (ಡಿಸೆಂಬರ್​ 25); ಸಿಎಎ ಕಾಯ್ದೆ ವಿರೋಧಿ ಹೋರಾಟದ ವೇಳೆ ಮಂಗಳೂರಿನಲ್ಲಿ ಪೊಲೀಸ್​ ಗೋಲಿಬಾರ್​ಗೆ ಬಲಿಯಾದ ಇಬ್ಬರು ಯುವಕರ ಕುಟುಂಬಗಳಿಗೆ 1 ರೂ. ಸಹ ಪರಿಹಾರ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಳೆದ ಗುರುವಾರ ಮಂಗಳೂರಿನಲ್ಲಿ ಪ್ರತಿಭಟನೆಗಳು ಹೆಚ್ಚಾದ ಕಾರಣ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇದರ ನಡುವೆಯೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಡಿ. 19ರಂದು ಪೊಲೀಸರು ಗೋಲಿಬಾರ್ ನಡೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ ಗುಂಡೇಟಿನಿಂದ ಜಲೀಲ್ ಮತ್ತು ನೌಶಿನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಪೊಲೀಸರ ಗೋಲಿಬಾರ್​ ಕೃತ್ಯಕ್ಕೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿತ್ತು.ಈ ವೇಳೆ ಪೊಲೀಸರ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್​ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರೆ, ಪೊಲೀಸರೂ ಸಹ ತಾವು ಏಕೆ ಗೋಲಿಬಾರ್ ಮಾಡುವ ಸನ್ನಿವೇಶ ಸೃಷ್ಟಿಯಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿ​ಕೊಳ್ಳುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ನಡುವೆ ವಿಡಿಯೋದಲ್ಲಿ ಜನ ಪೊಲೀಸರೆಡೆಗೆ ಕಲ್ಲು ತೂರಾಟ ಮಾಡುವ ದೃಶ್ಯಗಳು ದಾಖಲಾಗಿದ್ದವು. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಲ್ ಸೇರಿದಂತೆ ಬಿಜೆಪಿ ಪಕ್ಷದ ಹಲವು ಶಾಸಕರು ಹಾಗೂ ಸಚಿವರು ಗೋಲಿಬಾರ್​ನಲ್ಲಿ ಮೃತಪಟ್ಟ ಯುವಕರು ಗಲಭೆ ಆರೋಪಿಗಳಾಗಿದ್ದು, ಅವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುವ ಕುರಿತು ತಕರಾರೆತ್ತಿದ್ದರು.

ಹೀಗಾಗಿ ಪ್ರಕರಣದ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿರುವ ಬಿ.ಎಸ್.​ ಯಡಿಯೂರಪ್ಪ ಈ ಕುರಿತು ಇಂದು ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ, “ಗೋಲಿಬಾರ್​ನಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಈವರೆಗೆ ಪರಿಹಾರದ ಹಣ ಘೋಷಣೆ ಮಾಡಿಲ್ಲ. ಅಲ್ಲದೆ, ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಮುಗಿಯುವವರೆಗೆ ಯಾರಿಗೂ ಪರಿಹಾರ ನೀಡಲಾಗುವುದಿಲ್ಲ. ಒಂದು ವೇಳೆ ತನಿಖೆಯಲ್ಲಿ ಮೃತಪಟ್ಟ ಇಬ್ಬರೂ ಯುವಕರು ಅಪರಾಧಿಗಳು ಎಂಬುದು ಸಾಭೀತಾದರೆ ಯಾರಿಗೂ 1 ರೂ. ಸಹ  ಪರಿಹಾರ ನೀಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಮಂಗಳೂರು ಗೋಲಿಬಾರ್​ ರಾಜಕಾರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.