ಭಾರತದ ಎಲ್ಲ 130 ಕೋಟಿ ಜನರೂ ಹಿಂದೂಗಳು ; ವಿಜಯ ಸಂಕಲ್ಪ ಶಿಬಿರದ ಸಾರ್ವಜನಿಕ ಸಭೆಯಲ್ಲಿ ಮೋಹನ್ ಭಾಗ್ವತ್ – ಕಹಳೆ ನ್ಯೂಸ್
ಹೈದರಾಬಾದ್, ಡಿ.26: ಭಾರತದಲ್ಲಿ ವಾಸಿಸುವವರ ಧರ್ಮ ಹಾಗೂ ಸಂಸ್ಕೃತಿ ಯಾವುದೇ ಆಗಿದ್ದರೂ ಎಲ್ಲ 130 ಕೋಟಿ ಮಂದಿಯೂ ಹಿಂದೂಗಳೆಂದೇ ಆರೆಸ್ಸೆಸ್ ಪರಿಗಣಿಸುತ್ತದೆ ಎಂದು ಸಂಘಟನೆಯ ಮುಖ್ಯಸ್ ಮೋಹನ್ ಭಾಗ್ವತ್ ಹೇಳಿದ್ದಾರೆ.
ಭಿನ್ನ ಧರ್ಮ ಹಾಗೂ ಸಂಸ್ಕೃತಿಯ ಹೊರತಾಗಿಯೂ, ರಾಷ್ಟ್ರೀಯತೆಯ ಭಾವನೆ ಇರುವವರು, ದೇಶದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಗೌರವ ಇರುವವರೆಲ್ಲರೂ ಹಿಂದೂಗಳೇ; ಇಡೀ 130 ಕೋಟಿ ಮಂದಿಯೂ ಹಿಂದೂಗಳೆಂದೇ ಆರೆಸ್ಸೆಸ್ ಪರಿಗಣಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಇಡೀ ಸಮಾಜ ನಮ್ಮದು; ಸಂಘ ಇಂಥ ಒಗ್ಗಟ್ಟಿನ ಸಮಾಜ ನಿರ್ಮಾಣದ ಗುರಿ ಹೊಂದಿದೆ” ಎಂದು ವಿವರಿಸಿದ್ದಾರೆ.
“ಸಂಘ ಹಿಂದೂ ಎಂದು ಹೇಳಿದಾಗ ಅದರಲ್ಲಿ ಭಾರತವನ್ನು ಮಾತೃಭೂಮಿ ಎಂದು ನಂಬುವ ಎಲ್ಲರೂ ಸೇರುತ್ತಾರೆ. ಭಾರತ, ಅದರ ಜನ, ನೀರು, ಭೂಮಿ, ಪ್ರಾಣಿ ಮತ್ತು ಅರಣ್ಯದ ಬಗ್ಗೆ ಪ್ರೀತಿ ಇರುವ ಎಲ್ಲರೂ ಅದರಲ್ಲಿ ಸೇರುತ್ತಾರೆ” ಎಂದು ಬಣ್ಣಿಸಿದ್ದಾರೆ.
“ಯಾವ ಭಾಷೆಯನ್ನಾದರೂ ಮಾತನಾಡಲಿ; ಯಾವ ಧರ್ಮಕ್ಕೇ ಸೇರಿರಲಿ. ಯಾವುದೇ ದೇವರನ್ನು ಪೂಜಿಸುತ್ತಿರಲಿ ಅಥವಾ ಪೂಜೆಯಲ್ಲಿ ನಂಬಿಕೆ ಇಲ್ಲದವರಾಗಿರಲಿ; ಭಾರತ ಮಾತೆಯ ಮಕ್ಕಳೆಲ್ಲ ಹಿಂದೂಗಳು” ಎಂದು ಸ್ಪಷ್ಟಪಡಿಸಿದರು.
ಆರೆಸ್ಸೆಸ್ ತೆಲಂಗಾಣ ಸದಸ್ಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ವಿಜಯ ಸಂಕಲ್ಪ ಶಿಬಿರದ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
“ವಿವಿಧತೆಯಲ್ಲಿ ಏಕತೆ ಎಂಬ ಮಾತಿದೆ. ಆದರೆ ನಮ್ಮ ದೇಶ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ವಿವಿಧತೆಯಲ್ಲಿ ಕೇವಲ ಏಕತೆಯಲ್ಲ; ಇದು ಏಕತೆಯ ವೈವಿಧ್ಯತೆ. ನಾವು ವಿವಿಧತೆಯಲ್ಲಿ ಏಕತೆಯನ್ನು ಹುಡುಕುತ್ತಿಲ್ಲ. ವಿವಿಧತೆ ಬಂದಲ್ಲಿಂದ ಏಕತೆ ಹುಡುಕುತ್ತಿದ್ದೇವೆ. ಏಕತೆ ಸಾಧಿಸಲು ವಿವಿಧ ಮಾರ್ಗಗಳಿವೆ” ಎಂದು ಅವರು ಪ್ರತಿಪಾದಿಸಿದರು.