ಸುಳ್ಯದ ಕೆ.ವಿ.ಜಿ ಕ್ಯಾಂಪಸ್‍ನಲ್ಲಿ ಸಂಸ್ಥಾಪಕರ ದಿನಾಚರಣೆ : ಅಮರ ಸುಳ್ಯವನ್ನು ಅಜರಾಮರವಾಗಿಸಿದ ದಾರ್ಶನಿಕ ಡಾ. ಕುರುಂಜಿ : ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ ಹೇಳಿಕೆ – ಕಹಳೆ ನ್ಯೂಸ್
ಸುಳ್ಯ : ಸುಳ್ಯದಂತಹ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕೇಂದ್ರಗಳನ್ನು ಕಟ್ಟಿ, ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಿ ತನ್ನ ದುಡಿಮೆ, ಶ್ರಮ ಕರ್ತವ್ಯನಿಷ್ಠೆಯ ಮೂಲಕ ಸಂಕಲ್ಪಿಸಿದನ್ನು ಸಾಧಿಸಿದ ಡಾ. ಕುರುಂಜಿಯವರು ಅಮರ ಸುಳ್ಯವನ್ನು ಅಜರಾಮರವಾಗಿಸಿದ ದಾರ್ಶನಿಕ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊೈಲಿ ಹೇಳಿದರು.
ಅವರು ಸುಳ್ಯದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ. ಕುರುಂಜಿ ವೆಂಕಟ್ರಮಣ ಗೌಡರ 91ನೇ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ದಿಗೆ ಶಿಕ್ಷಣ ಬಹುಮುಖ್ಯ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡಬಲ್ಲೆ ಎನ್ನುವ ಕುರುಂಜಿಯವರ ಸಂಕಲ್ಪ ಈಡೇರಿದೆ. ತನ್ನ ದುಡಿಮೆ, ಶ್ರಮ ಕರ್ತವ್ಯ ನಿಷ್ಠೆಯ ಮೂಲಕ ಸಂಕಲ್ಪ ಮಾಡಿದನ್ನು ಸಾಧಿಸಿದ ಸಾಧಕ. ಡಾ. ಕುರುಂಜಿಯವರದ್ದು ಪ್ರೇರಣಾದಾಯಿ ವ್ಯಕ್ತಿತ್ವ, ಸಾರ್ಥಕ ಬದುಕು ಕಂಡುಕೊಂಡು ದೊಡ್ಡ ನದಿಯಂತೆ ಹರಿದವರು. ಕುರುಂಜಿಯವರ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಮುಖ್ಯವಾಗಿ ಭೋಧಕ ವರ್ಗ ವಿದ್ಯಾರ್ಥಿಗಳಿಂದ ಹೆಚ್ಚಿನ ಕಲಿಕೆ ಅಗತ್ಯ. ಸಮಾಜಕ್ಕೆ, ಜಗತ್ತಿಗೆ ಹೊಸ ಬೆಳಕನ್ನು ನೀಡುವ ಹೊಸ ಜ್ಞಾನದ ವಿಕಾಸ ಮಾಡುವ ವಿದ್ಯಾರ್ಥಿಗಳು ಪ್ರತಿವರ್ಷ ಈ ಸಂಸ್ಥೆಗಳಿಂದ ಹೊರಬರಬೇಕು ಎಂದು ಹೇಳಿದರು
ಸಮಾರಂಭದಲ್ಲಿ ಸಂಸ್ಕರಣಾ ಭಾಷಣ ಮಾಡಿದ ಮಡಿಕೇರಿ ಅಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ ಕುರುಂಜಿ ಅವರು ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ವ್ಯಕ್ತಿತ್ವ. ಶಿಕ್ಷಣ ಮತ್ತು ಆರೋಗ್ಯ ಮಾತ್ರವಲ್ಲದೇ ಸರ್ವಾಂಗೀಣ ಅಭಿವೃದ್ದಿಯ ಹರಿಹಾರ. ಗ್ರಾಮೀಣ ಪ್ರದೇಶದ ನೂರಾರು ಬಡಮಕ್ಕಳಿಗೆ ಬದುಕು ಕೊಟ್ಟವರು ಡಾ. ಕುರುಂಜಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ವಹಿಸಿದ್ದರು. ವೇದಿಕೆಯಲ್ಲಿ ಅಕಾಡೆಮಿ ನಿರ್ದೇಶಕರುಗಳಾದ ಶೋಭಾ ಚಿದಾನಂದ, ಹೇಮನಾಥ ಕೆ.ವಿ, ಅಕ್ಷಯ್ ಕೆ.ಸಿ, ಸಂಸ್ಥಾಪನಾ ದಿನಾಚರಣೆಯ ಸಂಚಾಲಕ ಡಾ. ಎನ್.ಎ. ಜ್ಞಾನೇಶ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಸತ್ಯವತಿ, ಡಾ. ಶೀಲಾ ಜಿ. ನಾಯಕ್, ಡೆಂಟಲ್ ಕಾಲೇಜು ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್, ಆಯುರ್ವೇದ ಕಾಲೇಜು ಪ್ರಾಂಸುಪಾಲ ಡಾ. ಎನ್,ಎಸ್. ಶೆಟ್ಟರ್, ಆಡಳಿತಾಧಿಕಾರಿ ಡಾ.ಲೀಲಾಧರ್, ಪದವಿ ಕಾಲೇಜು ಪ್ರಾಂಶುಪಾಲ ಡಾ. ಗಿರಿಧರ ಗೌಡ, ಅಮರಜ್ಯೋತಿ ಪಿಯು ಕಾಲೇಜು ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ, ಸುನಿಲ್ ಕುಮಾರ್, ಭಾಗಮಂಡಲ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಶ್ರೀಕಾಂತ್, ಸುಳ್ಯ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು, ಎನ್‍ಎಂಪಿಯು ಕಾಲೇಜು ಪ್ರಾಂಶುಪಾಲೆ ಹರಿಣಿ ಪುತ್ತುರಾಯ, ಶಾಂತಾ ಬೈಪಡಿತ್ತಾಯ, ನರ್ಸಿಂಗ್ ಕಾಲೇಜು ಪ್ರಾಂಶುಪಾಲರುಗಳಾದ ಚಂದ್ರವತಿ, ಪ್ರೇಮಾ ಉಪಸ್ಥಿತರಿದ್ದರು.
ಕು. ಬೇಬಿ ವಿದ್ಯಾ, ಭವಾನಿಶಂಕರ ಅಡ್ತಲೆ, ಅನಿಲ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.