ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಶಾ ಆಗಮನ | ಎರಡು ದಿನದಲ್ಲಿ ಎಲ್ಲಿಗ್ಗೆಲ್ಲಾ ಹೋಗ್ತಾರೆ ‘ ಶಾ ‘ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ – ಕಹಳೆ ನ್ಯೂಸ್
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಯಿಂದಲೇ ಆರಂಭಿಕ ಪ್ರವಾಸ ಹಮ್ಮಿಕೊಂಡಿದ್ದಾರೆ.
ಸೋಮವಾರ ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಬಿಜೆಪಿ ಅಧ್ಯಕ್ಷರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ. ಬಳಿಕ ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಫೆಬ್ರವರಿ 20ರ ಪಂಚಮಿಯ ದಿನದಂದು ಬೆಳಗ್ಗೆ ಏಳು ಗಂಟೆಗೆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವರು. ಈ ಮೂಲಕ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಅಮಿತ್ ಷಾ ಇಳಿಯಲಿದ್ದಾರೆ. ಆವತ್ತೇ ಬೆಳಗ್ಗೆ 9 ಗಂಟೆಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಂಗಮದಲ್ಲಿ ಮಾತನಾಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಮತ್ತು ಬಂಟ್ವಾಳದಲ್ಲಿ ನವಶಕ್ತಿ ಸಂಗಮ ನಡೆಯಲಿದ್ದು ಸೀಮಿತ ಕಾರ್ಯಕರ್ತರು ಹೊರತುಪಡಿಸಿ ಉಳಿದವರಿಗೆ ಪಾಲ್ಗೊಳ್ಳುವ ಅವಕಾಶ ಇಲ್ಲ. ಬೆಳಗ್ಗೆ 11 ಗಂಟೆಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ ಇತ್ತೀಚಿಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸುರತ್ಕಲ್ ನ ಕಾಟಿಪಳ್ಳ ದ ದೀಪಕ್ ರಾವ್ ಮನೆಗೆ ಭೇಟಿ ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ದಕ್ಷಿಣ ಕನ್ನಡ ಪ್ರವಾಸ ಬಗ್ಗೆ ಮಾಹಿತಿ ನೀಡಿದ ಸಂಸದ ನಳಿನ್ ಕುಮಾರ್, ಅಮಿತ್ ಶಾ ಭೇಟಿಯಿಂದ ಕಾಂಗ್ರೆಸ್ ಪಾಳಯ ಭಯಗೊಂಡಿದ್ದಾಗಿ ಹೇಳಿದರು.