ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ : ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ – ಕಹಳೆ ನ್ಯೂಸ್
ಬೆಂಗಳೂರು : ಕಳೆದ ಎರಡು ಮೂರು ತಿಂಗಳಿಂದ ನಿರಂತರವಾಗಿ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಈರುಳ್ಳಿ ಬೆಲೆ ಈಗ ಕೊಂಚ ಇಳಿಮುಖವಾಗಿದೆ. ಹೀಗಾಗಿ ಈರುಳ್ಳಿ ಗ್ರಾಹಕರು ಸ್ವಲ್ಪ ರಿಲೀಫ್ ಆಗಿದ್ದಾರೆ.
ಕಳೆದ ವಾರ ಇದ್ದ ದರಕ್ಕಿಂತ ಈರುಳ್ಳಿ ದರ ಸದ್ಯ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆಜಿಗೆ 30 ರಿಂದ 40 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ.
ರಾಜಸ್ಥಾನ, ಮಹಾರಾಷ್ಟ್ರ ಭಾಗಗಳಿಂದ ಹೊಸದಾಗಿ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಯಶವಂತಪುರ ಎಪಿಎಂಸಿಯಲ್ಲಿ ಸಗಟು ದರದಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿಗೆ ಇದೀಗ 60-65 ರೂಪಾಯಿ ಇದೆ. ಕಳೆದ ಎರಡು ತಿಂಗಳಿಂದ ಈರುಳ್ಳಿ ದರ ಕೆ.ಜಿ.ಗೆ 100, 150 ರಿಂದ 180 ರೂ.ವರೆಗೆ ತಲುಪಿತ್ತು. ಹೀಗಾಗಿ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕಿದ್ದರು.
ಇನ್ನು ಈಜಿಪ್ಟ್ ಹಾಗೂ ಟರ್ಕಿ ದೇಶಗಳಿಂದಲೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ, ಸುಮಾರು ನಾಲ್ಕೈದು ದಿನಗಳ ಬಳಿಕ ಆಮದು ಮಾಡಿಕೊಂಡ ಈರುಳ್ಳಿ ದರ ಕುಸಿದಿದ್ದು, ಅನ್ಯ ರಾಷ್ಟ್ರಗಳ ಈರುಳ್ಳಿ ಸಂಗ್ರಹ ಹೊಂದಿರುವ ಸಂಸ್ಥೆಗಳಿಗೆ ಇದೀಗ ನಷ್ಟದ ಭೀತಿ ಉಂಟಾಗಿದೆ. ಮಾರುಕಟ್ಟೆಗಳಲ್ಲಿ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ಈಜಿಪ್ಟ್ ಹಾಗೂ ಟರ್ಕಿ ರಾಷ್ಟ್ರದ ಈರುಳ್ಳಿ ರುಚಿ ಕಡಿಮೆ ಇರುವುದರಿಂದ ಇವುಗಳನ್ನು ಖರೀದಿಸಲು ಗ್ರಾಹಕರು ಮುಂದಾಗುತ್ತಿಲ್ಲ.