Wednesday, January 22, 2025
ಸುದ್ದಿ

ಕಾಶ್ಮೀರದಲ್ಲಿ ಐಷಾರಾಮಿ ಹೋಟೆಲ್: ಕರ್ನಾಟಕದ ಆಸೆಗೆ ತಣ್ಣೀರು -ಕಹಳೆ ನ್ಯೂಸ್

ಬೆಂಗಳೂರು, ಜ.3: ಜಮ್ಮು ಮತ್ತು ಕಾಶ್ಮೀರದಲ್ಲಿ ಐಷಾರಾಮಿ ಹೋಟೆಲ್ ಆರಂಭಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಮೂರು ತಿಂಗಳು ಕಳೆದರೂ ಚಾಲನೆ ಸಿಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ತಿಂಗಳ ಕಾಲ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿದ್ದು, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಾಡಾದುದ್ದು ಸೇರಿದಂತೆ ಹಲವು ತಾಂತ್ರಿಕ ಕಾರಣಗಳು ರಾಜ್ಯದ ಆಸೆಗೆ ತಣ್ಣೀರೆರಚಿವೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ತಕ್ಷಣವೇ ಅಲ್ಲಿ ಐಷಾರಾಮಿ ಹೋಟೆಲ್ ನಡೆಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಮುಂದಿಟ್ಟಿತ್ತು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಪತ್ರ ಬರೆದು ಸರ್ಕಾರದ ಉದ್ದೇಶವನ್ನು ವಿವರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಇಲ್ಲಿ ಹೋಟೆಲ್ ನಿರ್ವಹಿಸಲು ಉದ್ದೇಶಿಸಲಾಗಿತ್ತು. ಜಮ್ಮು ಕಾಶ್ಮೀರದಲ್ಲಿ 10ರಿಂದ 15 ಎಕರೆ ಜಮೀನು ಖರೀದಿಸಲಾಗುತ್ತದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷರ್ ಹೇಳಿಕೆ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸಂಪರ್ಕದ ತಡೆಯಿಂದಾಗಿ ಯೋಜನೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಪರ್ಕ ಕಡಿತದಿಂದಾಗಿ ನಮ್ಮ ಪ್ರಸ್ತಾವದ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ ಪುಷ್ಕರ್ ತಮ್ಮ ಪ್ರಯತ್ನ ಕೈಬಿಟ್ಟಿಲ್ಲ. ಅಗತ್ಯ ಬಿದ್ದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹಿಂದೆ ಸಚಿವರು ಜಮ್ಮು ಕಾಶ್ಮೀರ ರಾಜ್ಯದ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ ಇದೀಗ ಅದು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಹೊಸ ಪ್ರಕ್ರಿಯೆ ಆರಂಭಿಸುವಂತೆ ಜಮ್ಮು ಕಾಶ್ಮೀರ ಅಧಿಕಾರಿಗಳು ಕೋರಿದ್ದಾಗಿಯೂ ಅವರು ವಿವರಿಸಿದ್ದಾರೆ.