ಪುತ್ತೂರು: ಜೀವನದಲ್ಲಾಗುವ ಪ್ರತಿಯೊಂದು ಘಟನೆಯಿಂದ ನಮಗೆ ದೊರೆಯುವ ಅನುಭವ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ-ಕಹಳೆ ನ್ಯೂಸ್
ಪುತ್ತೂರು: ಜೀವನದಲ್ಲಾಗುವ ಪ್ರತಿಯೊಂದು ಘಟನೆಯಿಂದ ನಮಗೆ ದೊರೆಯುವ ಅನುಭವ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ.
ವಿದ್ಯಾರ್ಥಿಗಳು ರಜಾದಿನಗಳಲ್ಲಿ ಪಡೆದ ಅನುಭವವೂ ಕಾಲೇಜಿನಲ್ಲಿ ಪಡೆಯುವ ಅನುಭವಗಳಿಗಿಂತ ಭಿನ್ನವಾಗಿದೆ. ನಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸುವ ಘಟನೆಗಳು ನಮ್ಮನ್ನು ಇನ್ನಷ್ಟು ಸದೃಢರನ್ನಾಗಿಸುತ್ತದೆ.
ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಇಂತಹ ಅನುಭವಗಳ ಅಗತ್ಯವಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಇಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕಿ ಸ್ವರ್ಣಲಕ್ಷ್ಮೀ ಹೇಳಿದರು.
ಅವರು ಇಲ್ಲಿನ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ರಜೆಯ ಮಜ’ ಎಂಬ ವಿಷಯದ ಬಗ್ಗೆ ಗುರುವಾರ ಮಾತನಾಡಿದರು.
ಪ್ರಸ್ತುತ ನಮ್ಮಲ್ಲಿ ಕುಟುಂಬದೊಂದಿಗಿನ ಒಡನಾಟ ಕಡಿಮೆಯಾಗುತ್ತಿದೆ. ಎಲ್ಲರೂ ಸೇರಿ ಒಂದು ಹೊತ್ತಿನ ಊಟವನ್ನು ಮಾಡುವುದು ಇಲ್ಲ, ಇದರಿಂದ ನಮ್ಮಲ್ಲಿರುವ ಬಾಂಧವ್ಯ ಕುಂಠಿತವಾಗುತ್ತಿದೆ.
ರಜಾದಿನಗಳಲ್ಲಾದರೂ ಎಲ್ಲರೂ ಜೊತೆಯಾಗಿದ್ದು ಸಮಯ ಕಳೆಯುವ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಕೇವಲ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಒಡನಾಟದಿಂದ ನಮ್ಮ ಸಂಬಂಧಗಳು ಇಂದು ಮುರಿದು ಬೀಳುತ್ತಿದೆ ಎನ್ನುವುದು ವಿಶಾದನೀಯ ಎಂದು ಅಭಿಪ್ರಾಯಪಟ್ಟರು.
ಉತ್ತಮ ಮಾತುಗಾರಾಗಿ ಪ್ರಥಮ ವರ್ಷದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ನಮಿತಾ ಆಯ್ಕೆಯಾದರು. ದ್ವಿತೀಯ ವರ್ಷದ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು.
ವಿದ್ಯಾಥಿಗಳಾದ ಆಕರ್ಷ, ದಿಕ್ಷೀತಾ, ಚರಿಷ್ಮಾ, ಆಶಿತಾ ಅರುಣ್ ಕುಮಾರ್, ತನುಶ್ರೀ, ಸವಿತ, ಸೌಜನ್ಯ, ಜಗದೀಶ್, ವಿನೀತಾ ಕಾರ್ತಿಕ್, ಶಮಿತಾ, ಸಿಂಧೂ, ಕೃತಿಕಾ, ಗೌತಮ್, ಹಿತಾಲಾಕ್ಷಿ ಹಾಗೂ ರಾಮ್‍ಕಿಶನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯದರ್ಶಿ ತೇಜಶ್ರೀ ಪಿ. ವಿ. ಉಪಸ್ಥಿತರಿದ್ದರು.
ತೃತೀಯ ವರ್ಷದ ವಿದ್ಯಾರ್ಥಿನಿ ಧನ್ಯಶ್ರೀ ಸ್ವಾಗತಿಸಿ,ಕಾರ್ತಿಕ್ ವಂದಿಸಿದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.