ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರದಲ್ಲಿ ತೊಡಗಿರಬಹುದು.
ಆದರೆ ಅವರ ಮನಸ್ಸಿನಲ್ಲಿ ಅದಕ್ಕಿಂತ ದೊಡ್ಡ ವಿಷಯ ಓಡಾಡುತ್ತಿದೆ. ಕೇವಲ ಹಳೆ ಮೈಸೂರು ಭಾಗವಲ್ಲದೆ ದಕ್ಷಿಣ ಕರ್ನಾಟಕದಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ನೋಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವುದು ತಮ್ಮ ಬಯಕೆಯಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನಕ್ಕೆ ಹೇಳಿದ್ದಾರೆ.
ರಾಜ್ಯಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ, ಹೇಗೆ ನಿಭಾಯಿಸುತ್ತಿದ್ದೀರಿ?
-ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪು ಕಲ್ಪನೆಗಳಿವೆ. ಜನರಿಗೆ ಈ ಬಗ್ಗೆ ಸರಿಯಾಗಿ ಮನದಟ್ಟು ಮಾಡಬೇಕಿದೆ. ಅದಕ್ಕಾಗಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜನರಲ್ಲಿರುವ ಭಯಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತುಪ್ಪ ಸುರಿಯುತ್ತಿವೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಹೆಗ್ಗುರುತನ್ನು ಹೇಗೆ ಹೆಚ್ಚಿಸುತ್ತೀರಿ?
-ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನಷ್ಟು ಮತದಾರರ ಮನ ಗೆಲ್ಲಬೇಕು. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಹಿಂದಿನ ಸ್ಥಾನದಲ್ಲಿದೆ. ಇಲ್ಲಿ 70ಕ್ಕೂ ಹೆಚ್ಚು ಕ್ಷೇತ್ರಗಳಿದ್ದು ಪಕ್ಷದ ಕಾರ್ಯತಂತ್ರದ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನ ಮತದಾರರ ಮನ ಗೆಲ್ಲಬೇಕು. ಇಡೀ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿಸುವುದು ನನ್ನ ಗುರಿ.
ಕೆ ಆರ್ ಪೇಟೆಯಲ್ಲಿ ಗೆದ್ದ ಬಗ್ಗೆ?
ಕೆ ಆರ್ ಪೇಟೆಯಲ್ಲಿ ನಾಮಪತ್ರ ಸಲ್ಲಿಸುವ ದಿನ ನಾರಾಯಣ ಗೌಡ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಮತದಾರರ ಮನಸ್ಸು ಇದ್ದಂತೆ ತೋರುತ್ತಿತ್ತು. ನಾರಾಯಣ ಗೌಡ ಅವರನ್ನು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅದನ್ನು ಗಮನಿಸಿ ಅವರನ್ನು ಮನೆಗೆ ಬಿಟ್ಟುಬಂದರು. ಕೆ ಆರ್ ಪೇಟೆಯಲ್ಲಿ ಜನರಿಗೆ ಜೆಡಿಎಸ್ ಯಾವುದೇ ಮೂಲಭೂತ ಸೌಕರ್ಯ ಮಾಡಿಕೊಟ್ಟಿಲ್ಲವೆಂಬುದನ್ನು ಪ್ರಚಾರ ವೇಳೆ ತೋರಿಸಿಕೊಟ್ಟೆವು. ಬಿಜೆಪಿಗೆ ಅಧಿಕಾರ ಕೊಟ್ಟರೆ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುತ್ತದೆ ಎಂದೆವು, ನಮ್ಮ ಮೇಲೆ ಜನ ನಂಬಿಕೆ ಇಟ್ಟು ಗೆಲ್ಲಿಸಿದರು.