ವಾಷಿಂಗ್ಟನ್, ಜ.6: ಇರಾನ್ ಸೇನೆಯ ಜನರಲ್ ಅವರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಆ ರಾಷ್ಟ್ರ ದಾಳಿ ನಡೆಸಿದರೆ, ಇರಾನ್‌ನ ಸಾಂಸ್ಕೃತಿಕ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಈ ಆಘಾತಕಾರಿ ಹೇಳಿಕೆ ಕಾರ್ಯಗತಗೊಂಡರೆ ಅದು ಯುದ್ಧಾಪರಾಧವಾಗಲಿದೆ.
“ಇರಾನ್ ಗೆ ಗಂಭೀರವಾಗಿ ನೀಡುವ ಎಚ್ಚರಿಕೆಯೆಂದರೆ, ಯಾವುದೇ ಅಮೆರಿಕನ್ನರ ಮೇಲೆ ಅಥವಾ ಅಮೆರಿಕದ ಆಸ್ತಿಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಿದಲ್ಲಿ, ನಾವು ಇರಾನ್‌ನ 52 ಸ್ಥಳಗಳ ಮೇಲೆ ದಾಳಿ ಮಾಡಲು ಗುರಿ ಇಟ್ಟಿದ್ದೇವೆ. ಇದರಲ್ಲಿ ಕೆಲವು ಅತ್ಯುನ್ನತ ಮಟ್ಟದ, ಇರಾನ್‌ಗೆ ಮಹತ್ವದ್ದಾದ, ಇರಾನ್ ಸಂಸ್ಕೃತಿಗೆ ಸಂಬಂಧಿಸಿದ ತಾಣಗಳು ಸೇರಿವೆ. ಈ ತಾಣಗಳ ಮೇಲೆ ಕ್ಷಿಪ್ರ ಹಾಗೂ ಕಠಿಣ ದಾಳಿ ನಡೆಸಲಾಗುತ್ತದೆ. ಅಮೆರಿಕ ಮತ್ತೆ ಯಾವ ಬೆದರಿಕೆಯನ್ನೂ ಬಯಸುವುದಿಲ್ಲ!” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
“ಅಮೆರಿಕದ ವ್ಯಕ್ತಿಯನ್ನು ಹತ್ಯೆ ಮಾಡಿದ ಉಗ್ರಗಾಮಿ ನಾಯಕನ ಮೇಲೆ ದಾಳಿ ನಡೆಸಿದ ಅಮೆರಿಕದ ಮೇಲೆ ಪ್ರತಿದಾಳಿ ಮಾಡುವುದಾಗಿ ಇರಾನ್ ದಿಟ್ಟವಾಗಿ ಮಾತನಾಡುತ್ತಿದೆ. ಆ ವ್ಯಕ್ತಿ (ಜನರಲ್ ಸುಲೈಮಾನಿ) ಇತ್ತೀಚೆಗೆ ಇರಾನ್ ಪ್ರತಿಭಟನಾಕಾರರೂ ಸೇರಿದಂತೆ ತನ್ನ ಜೀವಿತಾವಧಿಯಲ್ಲಿ ಹತ್ಯೆ ಮಾಡಿದ ಎಲ್ಲರನ್ನೂ ಉಲ್ಲೇಖಿಸುವುದಿಲ್ಲ. ಆತ ನಮ್ಮ ರಾಯಭಾರಿ ಕಚೇರಿ ಮೇಲೆ ಈಗಾಗಲೇ ದಾಳಿ ನಡೆಸಿ, ಇತರ ಸ್ಥಳಗಳ ಮೇಲೂ ದಾಳಿಗೆ ಸಜ್ಜಾಗುತ್ತಿದ್ದ. ಹಲವು ವರ್ಷಗಳಿಂದ ಇರಾನ್ ಸಮಸ್ಯೆಯಾಗಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
ಸಾಂಸ್ಕೃತಿಕ ತಾಣಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ಬಂದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಅಫ್ಘಾನಿಸ್ತಾನದಲ್ಲಿ ಯುನೆಸ್ಕೊ ಪರಂಪರೆ ತಾಣವಾದ ಬಮಿಯಾನ ಬುದ್ಧನನ್ನು ಧ್ವಂಸಗೊಳಿಸುವುದಾಗಿ ತಾಲಿಬಾನ್ ನೀಡಿದ ಎಚ್ಚರಿಕೆಯ ಜತೆ ಟ್ರಂಪ್ ಎಚ್ಚರಿಕೆಯನ್ನು ಹೋಲಿಸಲಾಗುತ್ತಿದೆ.