ಮಂಗಳೂರು, ಜನವರಿ 06: ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಇಂದು ಅಪರೂಪದ ವೇಲ್ ಶಾರ್ಕ್ ಮೀನು ಪತ್ತೆಯಾಗಿದೆ.
ಕಡಲ ತೀರದಿಂದ 20 ಕಿಲೋ ಮೀಟರ್ ದೂರದಲ್ಲಿ ವೇಲ್ ಶಾರ್ಕ್ ಸಮುದ್ರದ ಮೇಲ್ಮೈ ನಲ್ಲಿ ಈಜುತ್ತಿರುವ ಅಪರೂಪದ ದೃಶ್ಯ ಕೋಸ್ಟಲ್ ಬರ್ಡ್ ವಾಚರ್ಸ್ ತಂಡದವರಿಗೆ ಕಾಣಸಿಕ್ಕಿದೆ. ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಹಮ್ಮಿಕೊಳ್ಳಲಾದ ಸಾಗರ ಪಕ್ಷಿ ವೀಕ್ಷಣಾ ಅಭಿಯಾನದ ವೇಳೆ 15ರಿಂದ 20 ಕಿ.ಮೀನಷ್ಟು ದೂರ ಸಮುದ್ರದಲ್ಲಿ ಸಾಗಿರುವ ತಂಡಕ್ಕೆ ಅಪರೂಪದ ವೇಲ್ ಶಾರ್ಕ್ ಮೀನು ಸಮುದ್ರದಲ್ಲಿ ಈಜುವುದು ಕಂಡುಬಂದಿದೆ. ಐದು ನಿಮಿಷ ಕಾಲ ಅದರ ವಿಡಿಯೋವನ್ನೂ ಈ ತಂಡ ಸೆರೆಹಿಡಿದಿದೆ.
ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು!
ಈವರೆಗೆ ಗುಜರಾತ್, ಮಹಾರಾಷ್ಟ್ರ ಸಮುದ್ರ ಭಾಗದಲ್ಲಿ ಈ ವೇಲ್ ಶಾರ್ಕ್ ಕಾಣಸಿಕ್ಕಿದ್ದು, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲೂ ವೇಲ್ ಶಾರ್ಕ್ ಕಂಡಿದೆ. ಸುಮಾರು 20 ಅಡಿ ಉದ್ದವಿರುವ ಈ ಶಾರ್ಕ್ ನೇತ್ರಾಣಿ ಭಾಗದಿಂದ ಮಂಗಳೂರಿಗೆ ಬಂದಿರುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್‌ವರ್ಕ್ ವರ್ಷಕ್ಕೆ ಒಂದೆರಡು ಬಾರಿ ಕರಾವಳಿ ರಕ್ಷಣಾ ಪಡೆ ನೌಕೆಯ ನೆರವಿನಲ್ಲಿ ಸಮುದ್ರದಲ್ಲಿ ಇಂತಹ ಅಭಿಯಾನ ಆಯೋಜಿಸುತ್ತದೆ. ಈ ಬಾರಿಯ ಅಭಿಯಾನದಲ್ಲಿ ಮೈಸೂರಿನ ಶ್ರೀಕಾಂತ್ ಆರ್.ಜಿ, ವಿಜಯಲಕ್ಷ್ಮಿ, ಬೆಂಗಳೂರಿನ ಮಂಜುಳಾ, ಮಂಗಳೂರಿನ ಗೋಪಾಲಕೃಷ್ಣ, ರೋಹಿತ್ ಭಂಡಾರಿ, ಮ್ಯಾಕ್ಸಿಂ, ವಿನಯ್ ಭಟ್, 9 ವರ್ಷದ ಪೋರ ಶ್ಲೋಕ್ ಭಾಗವಹಿಸಿದ್ದರು.