ಬೆಂಗಳೂರು : “ನಮ್ಮ ರಾಜ್ಯದ ಧ್ವನಿಯಾಗಿ ಎಚ್.ಡಿ.ದೇವೆಗೌಡರು ಸಂಸತ್‌ಗೆ ಹೋಗಬೇಕು ಎನ್ನುವುದು ನನ್ನ ಆಶಯ. ಅವರು ರಾಜ್ಯಸಭೆಗೆ ಹೋಗಲು ಒಪ್ಪಿಗೆ ನೀಡಿದರೆ, ನಾನು ತ್ಯಾಗ ಮಾಡಲು ಸಿದ್ದ.
ನನಗೆ ಯಾವುದೇ ಅಸಮಾಧಾನವಿಲ್ಲ” ಎಂದು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿದರು.
ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಬಿಬಿಎಂಪಿ ಚುನಾವಣೆಯ ವೇಳೆ ಕನಿಷ್ಟ 70 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಹಾಗಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ನಾಳೆಯಿಂದ ಟಿಕೆಟ್ ಆಕಾಂಕ್ಷಿಗಳು 1 ತಿಂಗಳಿನ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತೀ ವಾರ್ಡ್‌ನಲ್ಲಿಯೂ ಪಕ್ಷದ ಕಚೇರಿ ತೆರೆಯಲು ವಾರ್ಡ್‌ನ ಅಧ್ಯಕ್ಷರಿಗೆ ತಿಳಿಸಿದ್ದೇವೆ. ಇವತ್ತಿನಿಂದಲೇ ವಾರ್ಡ್ ಮಟ್ಟದಲ್ಲಿ ಪಕ್ಷವನ್ನು ಸದೃಢ ಮಾಡಲು ಕಾರ್ಯಕರ್ತರು ಸಿದ್ದರಾಗಿರಬೇಕು” ಎಂದು ಹೇಳಿದರು.
ಈ ಸಂದರ್ಭ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಜ.24ರಂದು ಬೆಂಗಳೂರು ಜೆಡಿಎಸ್ ವಿಭಾಗದ ವತಿಯಿಂದ ಟೌನ್‌ಹಾಲ್ ಬಳಿ ಬೃಹತ್ ಪ್ರತಿಭಟನೆ ಮಾಡಲು ಸಭೆಯಲ್ಲಿ ತಿರ್ಮಾನಿಸಿದ್ದಾರೆ ಎನ್ನಲಾಗಿದೆ.