ಕಡಬ : ನಾದಿನಿಯ ಮುಖಕ್ಕೆ ಭಾವನೇ ಆಸಿಡ್ ಎರಚಿದ ಘಟನೆ ಕಡಬ ಠಾಣೆ ವ್ಯಾಪ್ತಿಯ ಕೋಡಿಂಬಾಳದಲ್ಲಿ ಗುರುವಾರ ಸಂಜೆ ನಡೆದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಲ್ಐಸಿ ಏಜೆಂಟ್ ಆಗಿರುವ ಆರೋಪಿ ಕೊಠಾರಿ ನಿವಾಸಿ ಜಯಾನಂದ ಕೊಠಾರಿ (55) ಕೃಷಿಕರಾಗಿದ್ದು ತನ್ನ ತಮ್ಮನ ಪತ್ನಿ ವಿಧವೆ ಸ್ವಪ್ನಾ (೩೫) ಎಂಬವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ ಎರಚಿದ್ದಾನೆ.
ಈ ಸಂದರ್ಭದಲ್ಲಿ ಹೆಣ್ಣು ಮಗು ಮಹಿಳೆಯ ಸಮೀಪದಲ್ಲಿ ಇದ್ದು ಆ ಮಗುವಿಗೂ ಆಸಿಡ್ ತಗಲಿದೆ. ಇಬ್ಬರಿಗೂ ಪುತ್ತೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ವಪ್ನಾ ಅವರ ಪತಿ ಮೃತಪಟ್ಟಿದ್ದು, ಅವರು ತನ್ನ ಮೂವರು ಪುತ್ರಿಯರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ನಡುವೆ ಹಣಕಾಸಿನ ವಿಷಯದಲ್ಲಿ ಮನಸ್ತಾಪವಿದ್ದು ಹಾಗೆಯೇ ಭೂಮಿಯ ವಿಷಯದಲ್ಲೂ ವಿವಾದವಿದ್ದು ಜಗಳ ಆರಂಭವಾಗಿದೆ. ಈ ವಿಷಯದಲ್ಲಿ ಠಾಣೆಯಲ್ಲಿ ದೂರು ಕೂಡಾ ನೀಡಲಾಗಿತ್ತು.
ಈ ವಿಚಾರದಲ್ಲಿ ಗುರುವಾರ ಸಂಜೆ ವೇಳೆ ಮತ್ತೆ ಜಗಳ ನಡೆದಿದ್ದು ಆರೋಪಿ ಸ್ವಪ್ನಾ ಅವರಿಗೆ ಆಸಿಡ್ ಎರಚಿದ್ದಾನೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸಂತ್ರಸ್ತ ಮಹಿಳೆ ಹೇಳಿಕೆ ಪಡೆಯಲಿದೆ.