ಕೆಲವರು ಬಹಳ ಲಾಭ ಪಡೆದು ಅಧಿಕಾರ ಅನುಭವಿಸಿದ್ದಾರೆ. ಅವರು ಬೇರೆಯವರಿಗೂ ಸಚಿವ ಸ್ಥಾನ ಬಿಟ್ಟುಕೊಡಬೇಕು. ಎಲ್ಲ ಸ್ಥಾನಮಾನ ಅನುಭವಿಸಿದವರು ಸಚಿವ ಸ್ಥಾನ ಬಿಟ್ಟುಕೊಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಕೆಲವು ಸಚಿವರು ವಿಧಾನಸೌಧಕ್ಕೆ ಮಾತ್ರ ಸೀಮಿತರಾಗಿದ್ದಾರೆ, ನನಗೆ ಸಚಿವ ಸ್ಥಾನ ನೀಡಿದರೆ ಕ್ಯಾಬಿನೆಟ್ ಸ್ಥಾನವನ್ನು ಕೊಡಬೇಕು. ಸಣ್ಣಪುಟ್ಟ ಸ್ಥಾನಮಾನ ಒಪ್ಪುವುದಿಲ್ಲ. ಶಾಸಕನಾಗಿ ಮುಂದುವರೆಯುವೆ ಎಂದು ಹೇಳಿದ್ದಾರೆ.
ಕೆಲವರು ಲಾಭವನ್ನು ಅನುಭಸಿದ್ದಾರೆ. ಅವರು ತ್ಯಾಗ ಮಾಡಬೇಕು. ಸ್ಥಾನಮಾನ ಅನುಭವಿಸಿದವರು ಸಚಿವಗಿರಿ ಬಿಟ್ಟುಕೊಡಬೇಕು ಎಂದು ಪರೋಕ್ಷವಾಗಿ ಶೆಟ್ಟರ್ ಅವರಿಗೆ ಸಲಹೆ ನೀಡಿದ್ದಾರೆ. ಕೆಲವರು ಸಚಿವ ಸ್ಥಾನ ತ್ಯಾಗ ಮಾಡಬೇಕು. ತ್ಯಾಗ ಎಂದರೆ ಕಾರ್ಯಕರ್ತರಿಗೆ ಭಾಷಣ ಮಾಡುವುದಲ್ಲ. ರಾಜ್ಯದಲ್ಲಿ ಎಲ್ಲ ಅಧಿಕಾರ ಅನುಭವಿಸಿದವರು ತ್ಯಾಗ ಮಾಡಬೇಕು ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆ ಜಾಸ್ತಿ ಮಾಡುವುದರಿಂದ ಗೌರವ ಸಿಗುವುದಿಲ್ಲ. ಕಡಿಮೆ ಇದ್ದರೆ ಒಳ್ಳೆಯದು. ಹತ್ತು-ಹದಿನೈದು ಮಂದಿ ಉಪ ಮುಖ್ಯಮಂತ್ರಿ ಮಾಡಿದರೆ ಜೀರೋ ಟ್ರಾಫಿಕ್ ನಿಂದ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.