ನವದೆಹಲಿ(ಜ. 28): ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್, ಈ ಸ್ಥಾನವನ್ನು ಪಡೆಯಲೇ ಬೇಕು ಎಂಬ ಪಣತೊಟ್ಟಿದ್ದು, ಹೈ ಕಮಾಂಡ್ ಮನವೊಲಿಕೆಗೆ ದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ಇನ್ನೇನು ತಾವೇ ಆಯ್ಕೆಯಾಗುವ ಸಂಭಾವ್ಯ ಹೆಚ್ಚಿದೆ ಎನ್ನುವ ಹೊತ್ತಿನಲ್ಲಿ ಈ ಸ್ಥಾನಕ್ಕೆ ಮತ್ತೆ ಎಂಬಿ ಪಾಟೀಲ್ ಹೆಸರು ಮುನ್ನಲೆಗೆ ಬಂದಿತು. ಇದಕ್ಕೆ ಕಾರಣ ಡಿಕೆ ಶಿವಕುಮಾರ್ ಮೇಲಿನ ಜಾರಿ ನಿರ್ದೇಶನಾಲಯದ ಪ್ರಕರಣಗಳು. ಅಕ್ರಮ ಹಣಗಳಿಕೆ ಆರೋಪದ ಮೇಲೆ ಈಗಾಗಲೇ ಸೆರೆವಾಸ ಶಿಕ್ಷೆ ಅನುಭವಿಸಿರುವ ಡಿಕೆ ಶಿವಕುಮಾರ್ ಮೇಲಿನ ಪ್ರಕರಣಗಳು ಇನ್ನು ಇತ್ಯರ್ಥವಾಗಿಲ್ಲ.
ಇಂತಹ ಸಂದರ್ಭದಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ, ಈ ವೇಳೆ ವಿಚಾರಣೆಗೆ ಗುರಿಯಾದರೆ ಇದು ಪಕ್ಷಕ್ಕೆ ಮುಜುಗರವಾಗಲಿದೆ. ಈ ಹಿನ್ನೆಲೆಯಲ್ಲಿ ಅವರ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಲು ಹೈ ಕಮಾಂಡ್ ವಿಳಂಬ ನೀತಿ ಅನುಸರಿಸುತ್ತಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ದೆಹಲಿಗೆ ತೆರಳಿದ ಕನಕಪುರ ಶಾಸಕ, ಹೈ ಕಮಾಂಡ್ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸೋನಿಯಾ ಆಪ್ತ ಅಹಮದ್ ಪಟೇಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಂತಿಮವಾಗಿ ಸೋನಿಯಾ ಗಾಂಧಿ ಭೇಟಿಗಾಗಿ ಕಾದು ಕುಳಿತಿದ್ದು, ಸಮಯ ಸಿಕ್ಕಿಲ್ಲ.
ಡಿಕೆ ಶಿವಕುಮಾರ್ ಬಗ್ಗೆ ಸೋನಿಯಾ ಗಾಂಧಿಗೆ ಒಲವಿದ್ದರೂ, ಇಡಿ ಆತಂಕ ಅವರ ಎದುರಾಗಿದೆ. ಇದಕ್ಕೆ ಕಾರಣ, ತಮ್ಮ ಮೇಲಿನ ಪ್ರಕರಣದ ಕುರಿತು ವಿವರಣೆ ನೀಡಲು ಡಿಕೆಶಿ ಮುಂದಾಗಿದ್ದಾರೆ. ಜೊತೆಗೆ ಪಕ್ಷಕ್ಕೆ ಅವರು ನೀಡಿರುವ ಕೊಡುಗೆ, ಪಕ್ಷ ನಿಷ್ಠೆ ಬಗ್ಗೆ ಹೇಳಿಕೊಳ್ಳು ಯತ್ನಿಸಿದ್ದಾರೆ.
ಸಮಯ ನೀಡದ ಸೋನಿಯಾ
ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಈಗಾಗಲೇ ಗೊಂದಲಕ್ಕೆ ಒಳಗಾಗಿರುವ ಸೋನಿಯಾ ಗಾಂಧಿ ಕಾದು ನೋಡುವ ತಂತ್ರ ಅನುಸರಿಸಿದ್ದು, ಇವರೆಗೆ ಡಿಕೆ ಶಿವಕುಮಾರ್ ಅವರಿಗೆ ಸಮಯ ನೀಡಿಲ್ಲ. ಅಲ್ಲದೇ ದೆಹಲಿ ಚುನಾವಣೆಯಲ್ಲಿ ಅವರು ವ್ಯಸ್ತವಾಗಿರುವುದು ಒಂದು ಕಾರಣವಾಗಿರಬಹುದು ಎನ್ನಲಾಗಿದೆ.ಆದರೆ, ಡಿಕೆ ಶಿವಕುಮಾರ್ ಮಾತ್ರ ಶತಾಯಗತಾಯ ಹೈ ಕಮಾಂಡ್ ಭೇಟಿ ಮಾಡಲೇಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ ಎಷ್ಟು ದಿನವಾದರೂ ಸರಿ ಎಂದು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈಗಾಗಲೇ 5 ದಿನ ದೆಹಲಿಯಲ್ಲಿ ಕಳೆದಿರುವ ಡಿಕೆ ಶಿವಕುಮಾರ್ ಇನ್ನೆಷ್ಟು ದಿನ ಅಲ್ಲಿಯೇ ಉಳಿಯಲಿದ್ದಾರೆ ಎಂಬುದು ತಿಳಿಯದಾಗಿದೆ.
ಸಮರ್ಥನೆ ನೀಡಿದ ಡಿಕೆಶಿ
ಇನ್ನು ಈ ಕುರಿತು ಇಂದು ಮಾತನಾಡಿದ ಡಿಕೆ ಶಿವಕುಮಾರ್, ಲಾಬಿಗಾಗಿ ನಾನು ದೆಹಲಿಗೆ ಬಂದಿಲ್ಲ. ನನ್ನ ಮೇಲಿನ ಪ್ರಕರಣದ ಕುರಿತು ನಮ್ಮ ವಕೀಲರನ್ನು ಭೇಟಿಯಾಗಲು ಬಂದಿದ್ದೇನೆ. ದೆಹಲಿಗೆ ಬಂದಾಗ ಪಕ್ಷದ ನಾಯಕರನ್ನು ಭೇಟಿಯಾಗುವುದು ಸೌಜನ್ಯ. ಇದೇ ಹಿನ್ನೆಲೆ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದೇನೆ. ಸೋನಿಯಾ ಭೇಟಿಗೆ ಪ್ರಯತ್ನ ಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.