Tuesday, January 21, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರೀ ಪ್ಲೇಸ್‍ಮೆಂಟ್ ಟ್ರೈನಿಂಗ್ ಕಾರ್ಯಾಗಾರ-ಕಹಳೆ ನ್ಯೂಸ್

ಪುತ್ತೂರು: ತರಬೇತಿ ಕಾರ್ಯಾಗಾರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಶಿಕ್ಷಣದ ಹಂತದಲ್ಲಿಯೇ ವೃತ್ತಿ ಬದುಕಿಗೆ ಅಗತ್ಯವುಳ್ಳ ಪೂರ್ವ ತಯಾರಿಯನ್ನು ನಡೆಸಿಕೊಳ್ಳುವುದು ಜಾಣತನ ಎಂದು ಮಂಗಳೂರಿನ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‍ನ ಮಾರ್ಕೆಟಿಂಗ್ ಮುಖ್ಯಸ್ಥೆ ಅವನಿ ಪಾರ್ವತಿ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಟ್ರೈನಿಂಗ್ ಆ್ಯಂಡ್ ಪ್ಲೇಸ್‍ಮೆಂಟ್ ಸೆಲ್, ಐಕ್ಯುಎಸಿ ಮತ್ತು ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ಜಂಟಿ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಎರಡು ದಿನಗಳ ಪ್ರೀ ಪ್ಲೇಸ್‍ಮೆಂಟ್ ಟ್ರೈನಿಂಗ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ಕಾರ್ಯಾಗಾರದಲ್ಲಿ ನೀಡಲಾಗುವ ಉಪಯುಕ್ತ ಮಾಹಿತಿ ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುವುದು. ವಿದ್ಯಾರ್ಥಿ ಬದುಕಿನಯೇ ಕನಸಿನ ವೃಕ್ಷಕ್ಕೆ ನೀರೆರೆಯುವ ಕೆಲಸ ಆಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಕಾಲೇಜಿನಲ್ಲಿ ಸಂಯೋಜನೆ ಮಾಡುವ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಮತ್ತು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಉದ್ಯೋಗದ ನಿರೀಕ್ಷೆಯಲ್ಲಿದ್ದವನಿಗೆ ಮೂಲ ಕೌಶಲ್ಯಗಳು ಬೇಕು. ಪಡೆದುಕೊಂಡ ಶಿಕ್ಷಣ, ಆರಿಸಿಕೊಂಡ ಕೋರ್ಸ್ ಸ್ವಂತ ಆಯ್ಕೆಯದ್ದಾಗಿರಬೇಕು. ತನ್ನ ಪರಿಮಿತಿಯನ್ನು ಅರಿತುಕೊಂಡು ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು. ಯಾರದೋ ಪ್ರತಿಷ್ಟಿತರ ಪ್ರಭಾವದಿಂದ ಉದ್ಯೋಗ ಗಿಟ್ಟಿಸಿಕೊಂಡರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಾಮಥ್ರ್ಯವಿರಬೇಕು. ಸ್ವಂತ ವ್ಯಕ್ತಿತ್ವ, ನಿರ್ಧಾರ ಮಾಡುವಷ್ಟು ಗಟ್ಟಿತನ ಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಸಾಮರ್ಥಿಕೆಗಳು ನಮ್ಮದಾದರೆ ಮಾತ್ರ ನಮ್ಮ ವೈಯಕ್ತಿಕ ಬದುಕು ಹಸನಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೋನ್ಹಾ ಮಾತನಾಡಿ, ಒಬ್ಬ ಮನುಷ್ಯನನ್ನು ಆತನ ಸಂವಹನ ಕೌಶಲ್ಯದಿಂದ ಅಳೆಯಲಾಗುತ್ತದೆ. ಬಲಿಷ್ಠ ದೇಹವಿದ್ದ ಮಾತ್ರಕ್ಕೆ ಯಾವುದೇ ಸ್ಥಾನಮಾನಗಳು ಹುಡುಕಿ ಬರಲಾರದು, ಜೊತೆಗೆ ಬುದ್ಧಿವಂತಿಕೆ, ಜ್ಞಾನವೂ ಬೇಕು. ಯಾವುದೋ ಪ್ರಖ್ಯಾತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಮಾತ್ರ ಸಾಮಥ್ರ್ಯವಲ್ಲ, ಹಾಗೆಯೇ ಹಿರಿಯರ ವ್ಯವಹಾರವನ್ನು ಅಭಿವೃದ್ಧಿ ಪಡಿಸುವುದು ಕೂಡಾ ಜಾಣತನ. ಯುವ ಸಮುದಾಯ ಉದ್ಯೋಗ ಅವಕಾಶಗಳ ಮಾಹಿತಿ ಪಡೆದುಕೊಂಡು ಅದನ್ನು ಗುರಿಯಾಗಿಸಿಕೊಂಡು ಪೂರಕ ತಯಾರಿ ನಡೆಸಬೇಕು. ಉದ್ಯೋಗ ಅರಸಿಕೊಂಡು ಹೋಗುವ ಬದಲು ಉದ್ಯೋಗ ಸೃಷ್ಠಿಸುವವರಾಗಿ, ಕೊರತೆಯಿರುವ ಕೌಶಲ್ಯವನ್ನು ಶ್ರಮವಹಿಸಿ ಸಂಪಾದಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಆಸ್ತಾ ಅಕಾಡೆಮಿಯ ಸುನಿಲ್ ಜಾರ್ಜ್ ಮತ್ತು ಐಬಿಎಮ್ ಮಂಗಳೂರು ಇದರ ಅವಿಸ್ಟನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಸುಮಾರು 120 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸೃಷ್ಠಿ ರೈ ಪ್ರಾರ್ಥಿಸಿ, ಟ್ರೈನಿಂಗ್ ಆ್ಯಂಡ್ ಪ್ಲೇಸ್‍ಮೆಂಟ್ ಸೆಲ್ ಸಂಯೋಜಕ ರಾಧಾಕೃಷ್ಣ ಗೌಡ ವಿ ಸ್ವಾಗತಿಸಿ, ಅಂತಿಮ ಬಿಬಿಎ ವಿದ್ಯಾರ್ಥಿನಿ ಜ್ಞಾನೇಶ್ವರಿ ವಂದಿಸಿ, ಅಂತಿಮ ಬಿಬಿಎ ವಿದ್ಯಾರ್ಥಿನಿ ಅನುರಾಧಾ ಭಾರಧ್ವಾಜ್ ನಿರೂಪಿಸಿದರು.