ಕಾಪು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಕಾರೊಂದರ ಏರ್‌ಬ್ಯಾಗ್ ಹಠಾತ್ ಆಗಿ ತೆರದುಕೊಂಡ ಘಟನೆ ಕಟಪಾಡಿ ತೇಕಲತೋಟದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ್ದು, ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.
ಕಟಪಾಡಿ ಕೌಶಲ್ ಬ್ರಿಕ್ಸ್ ಹೋಲೋ ಬ್ಲಾಕ್ ಕಂಪೆನಿಯ ಮಾಲಕ ಶಿವಪ್ರಸಾದ್ ಅವರು ತನ್ನ ಕಾರಿನಲ್ಲಿ ಕಟಪಾಡಿ ಒಳ ರಸ್ತೆಯಿಂದ ತೇಕಲತೋಟದ ಬಳಿ ಹೆದ್ದಾರಿಯನ್ನು ಪ್ರವೇಶಿಸುತ್ತಿದ್ದಂತೆಯೇ ಮುಂಭಾಗದ ಎರಡೂ ಏರ್‌ಬ್ಯಾಗ್‌ಗಳು ತೆರದುಕೊಂಡವು. ಆಗ ಕಾರಿನೊಳಗೆ ಸಂಪೂರ್ಣ ಗ್ಯಾಸ್ ಮಿಶ್ರಿತ ಹೊಗೆ ಆವರಿಸಿಕೊಂಡಿದ್ದು, ಸ್ವಲ್ಪ ಸಮಯ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಶಿವಪ್ರಸಾದ್ ಅವರು ತಕ್ಷಣವೇ ಕಾರನ್ನು ನಿಲ್ಲಿಸಿ ಪರಿಶೀಲಿಸಿದ್ದು, ಕೂಡಲೇ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿವಪ್ರಸಾದ್ ಅವರ ಸ್ನೇಹಿತರು ಹಾಗೂ ಸ್ಥಳೀಯ ಗ್ಯಾರೇಜ್‌ನವರು ಬಂದು ಕಾರನ್ನು ಪರಿಶೀಲಿಸಿದ್ದು, ಬಳಿಕ ಕಾರಿನ ಶೋರೂಂಗೆ ಮಾಹಿತಿ ನೀಡಿದ್ದಾರೆ. ಜಂಕ್ಷನ್ ಪ್ರದೇಶವಾದ ಕಾರಣ ಕಾರು ನಿಧಾನಕ್ಕೆ ಚಲಿಸುತ್ತಿತ್ತು, ವೇಗವಾಗಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದರೆ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ.
ಘಟನೆ ನಡೆದ ತಕ್ಷಣವೇ ಕಾರನ್ನು ನಿಯಂತ್ರಣಕ್ಕೆ ತಂದು ಪಕ್ಕದಲ್ಲಿ ನಿಲ್ಲಿಸಿದೆ. ಸಕಾರಣವಿಲ್ಲದೇ ಕಾರಿನ ಏರ್‌ಬ್ಯಾಗ್ ತೆರೆದುಕೊಂಡಿರುವುದರ ಹಿನ್ನೆಲೆ ಕಾರನ್ನು ಶೋರೂಂನವರು ಕೊಂಡೊಯ್ದಿದ್ದಾರೆ ಎಂದು ಶಿವಪ್ರಸಾದ್ ತಿಳಿಸಿದ್ದಾರೆ.