ಕೇವಲ ನಾಲ್ಕು ವರ್ಷಗಳ ಹಿಂದೆ ಭಾರತೀಯ ಪೌರತ್ವ ಪಡೆದ ವ್ಯಕ್ತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಕೇಂದ್ರ ಸರ್ಕಾರ ಪಾಕ್ ಪ್ರೇಮ ಮೆರೆದಿದೆ ಎಂದು ನಟಿ ಸ್ವರಾ ಭಾಸ್ಕರ್ ಆರೋಪಿಸಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ನಲ್ಲಿ ಭಾನುವಾರ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎಂಬ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು ಈ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಅದ್ನಾನ್ ಸಮಿ ಹೆಸರೂ ಸೇರಿದೆ. ಲಂಡನ್ ನಲ್ಲಿ ಜನಿಸಿದ ಅದ್ನಾನ್ ಪಾಕಿಸ್ತಾನದ ವಾಯುಪಡೆ ನಿವೃತ್ತ ಅಧಿಕಾರಿಯ ಪುತ್ರರಾಗಿದ್ದಾರೆ.
2015ರಲ್ಲಿ ಅದ್ನಾನ್ ಸಮಿ ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದರು. 2016ರಲ್ಲೇ ಅದ್ನಾನ್ ಅವರಿಗೆ ಕೇಂದ್ರ ಪೌರತ್ವ ಒದಗಿಸುತ್ತದೆ. ಇದೀಗ 118 ಮಂದಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಅದ್ನಾನ್ ಕೂಡಾ ಸೇರುವ ಮೂಲಕ ಬಿಜೆಪಿ ಪಾಕಿಸ್ತಾನ ಪ್ರೇಮ ತೋರಿದೆ ಎಂದು ಸ್ವರಾ ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಒಳನುಸುಳುಕೋರರನ್ನ ದೇಶದಿಂದ ಹೊರಹಾಕಲು ಸಿಎಎ ಮಸೂದೆ ಎನ್ನುತ್ತಲೇ ಕೇಂದ್ರ ಅದ್ನಾನ್ ಅಂತವರಿಗೆ ಪೌರತ್ವ ನೀಡುವ ಮೂಲಕ ಇಬ್ಬಂಗಿತನ ಪ್ರದರ್ಶಿಸಿದೆ ಎಂದು ನಟಿ ಆರೋಪಿಸಿದ್ದಾರೆ.
ಸಿಎಎ ಜಾರಿಗೆ ತರುವ ಮುಖೇನ ದೇಶದ ಸಂವಿಧಾನದ ಆಶಯಗಳಿಗೆ ದ್ರೋಹ ಎಸಗಲಾಗಿದೆ ಎಂದು ತಿಳಿಸಿದ ಸ್ವರಾ ಭಾಸ್ಕರ್, ಬಾಂಗ್ಲಾದೇಶ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಬಿಜೆಪಿ ಮುಖಂಡ ಕೈಲಾಶ್ ವರ್ಗೀಯ ಹೇಳಿಕೆಯನ್ನು ಖಂಡಿಸಿದರು.